ಕಾರ್ನಾಡ್ ನಿಧನಕ್ಕೆ ಕಂಬನಿ ಮಿಡಿದ ಚಿತ್ರರಂಗ

Update: 2019-06-10 15:52 GMT

ಬೆಂಗಳೂರು, ಜೂ.10: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್‌ರ ನಿಧನಕ್ಕೆ ಕನ್ನಡ ಚಿತ್ರರಂಗದ ಖ್ಯಾತನಾಮರು ಕಂಬಿನಿ ಮಿಡಿದಿದ್ದಾರೆ. ಕಾರ್ನಾಡ್ ಚಿತ್ರ ನಿರ್ದೇಶನದ ಒಂದಾನೊಂದು ಕಾಲದಲ್ಲಿ, ಗೋಧೂಳಿ ಚಿತ್ರದ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಹಿರಿಯ ನಿರ್ದೇಶಕ ನಾಗಾಭರಣ ಮಾತನಾಡಿ, ಅವರೊಬ್ಬರ ಅದ್ಭುತ ಗುರುವಾಗಿದ್ದರು. ಎಡಿಟಿಂಗ್ ಬಗೆಗೆ ನಾನು ಮೊದಲು ಕಲಿತದ್ದು ಅವರ ಜತೆಗಿದ್ದಾಗ. ಅನ್ವೇಷಣೆ, ನೆನಪಿನ ದೋಣಿ, ಮೈಸೂರು ಮಲ್ಲಿಗೆ ಚಿತ್ರಗಳಲ್ಲಿ ನಾನು ಅವರಿಗೆ ಆಕ್ಷನ್ ಕಟ್ ಹೇಳುವುದಕ್ಕೆ ಅವಕಾಶ ದೊರಕಿತ್ತು. ಅವರೇ ಕಲಿಸಿದ್ದನ್ನು ನಾನು ಅವರ ಮೇಲೆ ಪ್ರಯೋಗಿಸಿದ್ದೆ ಎಂದು ನಾಗಾಭರಣ ನೆನಪು ಮಾಡಿಕೊಂಡರು.

ಜ್ಞಾನಪೀಠ ಪ್ರಶಸ್ತಿ ವಿಜೇತ, ಹಿರಿಯ ಸಾಹಿತಿ ಹಾಗೂ ಮೇರು ಕಲಾವಿದರಲ್ಲೊಬ್ಬರಾದ ಗಿರೀಶ್ ಕಾರ್ನಾಡ್ ವಿಧಿವಶರಾಗಿರುವುದು ಕನ್ನಡ ಸಾಹಿತ್ಯ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಈ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ನಟ ದರ್ಶನ್ ಹೇಳಿದ್ದಾರೆ.

ಪದ್ಮಶ್ರೀ, ಪದ್ಮಭೂಷಣ, ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ನಮ್ಮನ್ನು ಅಗಲಿದ್ದಾರೆ. ಸಾಹಿತ್ಯ ಲೋಕಕ್ಕೆ ಹಾಗೂ ರಂಗಭೂಮಿಗೆ ಅವರು ನೀಡಿದ ಕೊಡುಗೆ ಅಪಾರ. ಅವರ ಜೊತೆ ಎರಡು ಚಿತ್ರಗಳಲ್ಲಿ ಅಭಿನಯಿಸಿದ ಭಾಗ್ಯ ನನ್ನದು ಎಂದು ಪವರ್ ಸ್ಟಾರ್ ನಟ ಪುನೀತ್ ರಾಜ್‌ಕುಮಾರ್ ಕಂಬನಿ ಮಿಡಿದಿದ್ದಾರೆ.

ಗಿರೀಶ್ ಕಾರ್ನಾಡ್‌ರು ಶ್ರೇಷ್ಠ ಬರಹಗಾರರು, ನಾನು ಅವರ ಸಾಹಿತ್ಯದ ಅಭಿಮಾನಿ. ಅವರೊಟ್ಟಿಗೆ ನಟಿಸಿದ್ದು ನನ್ನ ಪುಣ್ಯ ಎಂದು ನಟ ಸುದೀಪ್ ಎಂದರೆ, ಕನ್ನಡ ಸಾಹಿತ್ಯ ಲೋಕಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು, ಚಿಂತಕರು, ನಿರ್ದೇಶಕರು, ಹಿರಿಯ ಸಾಹಿತಿ ಹಾಗೂ ನಟರಾದ ಗಿರೀಶ್ ಕಾರ್ನಾಡ್‌ರವರ ಕೊಡುಗೆ ಅಪಾರ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಭಾವಪೂರ್ಣ ಶ್ರದ್ಧಾಂಜಲಿಗಳು ಎಂದು ನಟ ಉಪೇಂದ್ರ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಹಿರಿಯ ರಂಗಕರ್ಮಿ ಸಮಾಜದ ಬಗ್ಗೆ ಸದಾ ಯೋಚಿಸುತ್ತಿದ್ದ ಹಿರಿಯ ನಟರೂ ಆದ ಜ್ಞಾನಪೀಠ ಪುರಸ್ಕೃತರು ಆದ ಗಿರೀಶ್ ಕಾರ್ನಾಡ್ ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ನಟಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕಂಬನಿ ಮಿಡಿದಿದ್ದಾರೆ.

ನಟರಾದ ಗಣೇಶ್, ಶ್ರೀಮುರುಳಿ, ಸೃಜನ್ ಲೋಕೇಶ್, ನೀನಾಸಂ ಸತೀಶ್, ನಿರ್ದೇಶಕ ಶಶಾಂಕ್ ಸಂತಾಪ ಸೂಚಿಸಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ ಪದ್ಯದ ಮೂಲಕ ಕಾರ್ನಾಡರಿಗೆ ನುಡಿನಮನ ಸಲ್ಲಿಸಿದ್ದಾರೆ. ಅವರು ಪುಟಗಳಲ್ಲಿ ಜೀವಂತ, ರಂಗದಲ್ಲಿ ಜೀವಂತ, ಪರದೆಯಲ್ಲಿ ಜೀವಂತ, ತುಂಬು ಸ್ಮತಿಗಳಲ್ಲಿ ಜೀವಂತ, ಬದುಕಿದ್ದಾಗ ಬಾಳಿದ್ದಕ್ಕಿಂತ ಹೊರಟ ನಂತರ ಶಾಶ್ವತವಾಗಿ ಬದುಕುವುದು ಎಂದರೆ ಸಾಮಾನ್ಯವೇ?! ತಮಗೆ ಹೃತ್ಪೂರ್ವಕ ನಮನ ಎಂದು ಪದ್ಯದ ಮೂಲಕ ನುಡಿನಮನ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News