ಭೂಸ್ವಾಧೀನ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರಿಂದ ಹೆದ್ದಾರಿ ತಡೆ
ಬೆಂಗಳೂರು, ಜೂ.10: ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಕೈ ಬಿಡಬೇಕು ಎಂದು ಆಗ್ರಹಿಸಿ ವಿವಿಧ ರೈತ ಸಂಘಟನೆಗಳು ರಾಜ್ಯಾದ್ಯಂತ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರ ಪರಿಣಾಮ ಸಂಚಾರ ದಟ್ಟಣೆಯುಂಟಾಗಿತ್ತು.
ರಾಜ್ಯ ರೈತ ಸಂಘ, ಹಸಿರು ಸೇನೆ ಸೇನೆ ಸೇರಿದಂತೆ ಹತ್ತು ಹಲವು ರೈತ ಸಂಘಟನೆಗಳ ನೇತೃತ್ವದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಧಾರವಾಡ, ತುಮಕೂರು, ಚಿತ್ರದುರ್ಗ, ಹಾವೇರಿ ಸೇರಿದಂತೆ ಅನೇಕ ಕಡೆಗಳಲ್ಲಿ ಹೆದ್ದಾರಿಗಳಲ್ಲಿ ನೂರಾರು ರೈತರು ಸೇರಿ ಪ್ರತಿಭಟನೆ ನಡೆಸಿ, ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಮಾಡಲು ಮುಂದಾಗಿರುವುದನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.
ರಾಜ್ಯದ ಹಲವು ಹೆದ್ದಾರಿಗಳಲ್ಲಿ ಮುಂಜಾನೆ 6 ಗಂಟೆಯಿಂದಲೇ ರಸ್ತೆ ತಡೆ ನಡೆಸಿದ್ದರೆ, ಮತ್ತೊಂದು ಕಡೆ 8 ಗಂಟೆಗೆ ರೈತರು ರಸ್ತೆ ತಡೆ ನಡೆಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ಸಂದರ್ಭದಲ್ಲಿ ಹಿರಿಯ ಸಾಹಿತಿ, ಜ್ಞಾನಪೀಠ ಪುರಸ್ಕೃತರಾದ ಗಿರೀಶ್ ಕಾರ್ನಾಡ್‌ರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಶ್ರದ್ಧಾಂಜಲಿ ಸಲ್ಲಿಸಿ, ಬಳಿಕ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.
ಕೇಂದ್ರ ಸರಕಾರವು ರೈತ ವಿರೋಧಿ ಕಾಯ್ದೆಯಾದ ಭೂಸ್ವಾಧೀನ ಕಾಯ್ದೆಯನ್ನು ಜಾರಿ ಮಾಡುವ ಮೂಲಕ ರೈತರ ಭೂಮಿಯನ್ನು ಬಲವಂತವಾಗಿ ಕಸಿದುಕೊಂಡು ಕಾರ್ಪೋರೇಟ್ ಕಂಪನಿಗಳಿಗೆ ಹಂಚಲು ಮುಂದಾಗಿದ್ದಾರೆ. ಅನ್ನದಾತನ ಭೂಮಿಯನ್ನು ಕಸಿಯಲು ನಾವು ಅವಕಾಶ ನೀಡುವುದಿಲ್ಲ. ಸರಕಾರ ತನ್ನ ನಿರ್ಧಾರದಿಂದ ಕೂಡಲೇ ಹಿಂದೆ ಸರಿಯಬೇಕು ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್‌ರ ಕಾಲದಲ್ಲಿ ಭೂಸ್ವಾಧೀನ ಕಾಯ್ದೆಯ ಪ್ರಕಾರ ರೈತರ ಜಮೀನು ಸ್ವಾಧೀನಪಡಿಸಿಕೊಳ್ಳಲು ಅವರ ಅನುಮತಿ ಕಡ್ಡಾಯವಿರಬೇಕು. ರೈತರಿಗೆ ಮಾರುಕಟ್ಟೆ ದರದಲ್ಲಿ ಪರಿಹಾರ ಹಣ ನೀಡಬೇಕು. ಪರಿಹಾರ ಹಣ ತೃಪ್ತಿಕರವಾಗಿರದಿದ್ದರೆ ರೈತರು ನ್ಯಾಯಾಲಯದ ಮೊರೆ ಹೋಗಲು ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. ಆದರೆ, ಈಗ ಪ್ರಧಾನಿ ಮೋದಿ ತರಲು ಉದ್ದೇಶೀಸಿರುವ ಕಾಯ್ದೆಯಲ್ಲಿ ಈ ಎಲ್ಲವನ್ನು ಕೈಬಿಟ್ಟು ತಿದ್ದುಪಡಿ ಕಾಯ್ದೆ ತರಲು ಮುಂದಾಗಿದ್ದಾರೆ. ಇದು ರೈತ ವಿರೋಧಿ ಕಾಯ್ದೆಯಾಗಿದೆ ಎಂದು ರೈತ ಸಂಘಟನೆಗಳು ಆರೋಪಿಸಿವೆ.
ಬಂಧನ, ಬಿಡುಗಡೆ: ರಾಜ್ಯಾದ್ಯಂತ ವಿವಿಧ ಕಡೆಗಳಲ್ಲಿ ರಸ್ತೆ ಹೆದ್ದಾರಿ ತಡೆದ ರೈತ ಸಂಘಟನೆಗಳ ಕಾರ್ಯಕರ್ತರನ್ನು ಹಾಗೂ ನೂರಾರು ರೈತರನ್ನು ಅಲ್ಲಿನ ಸ್ಥಳೀಯ ಪೊಲೀಸರು ಬಂಧಿಸಿದ್ದು, ಅನಂತರ ಬಿಡುಗಡೆ ಮಾಡಿರುವುದು ವರದಿಯಾಗಿದೆ.
ಬೇಡಿಕೆಗಳು: ಕೇಂದ್ರ ಸರಕಾರ ತಿದ್ದುಪಡಿ ಭೂಸ್ವಾಧೀನ ಕಾಯ್ದೆಯನ್ನು ಜಾರಿ ಮಾಡುವುದನ್ನು ಹಿಂಪಡೆಯಬೇಕು. ರಾಜ್ಯ ಸರಕಾರ ರೈತರ ಸಾಲ ಮನ್ನಾ ಮಾಡಬೇಕು. ಬರ ಪರಿಹಾರ ಹಣ ಶೀಘ್ರ ಸಿಗಬೇಕು. ಬಳ್ಳಾರಿಯಲ್ಲಿ ಜಿಂದಾಲ್‌ಗೆ ನೀಡಿರುವ ಭೂ ಪರಭಾರೆಯನ್ನು ಹಿಂಪಡೆಯಬೇಕು. ಕಬ್ಬು ಬೆಳೆಗಾರರಿಗೆ ಬಾಕಿಯಿರುವ ಹಣ ಶೀಘ್ರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.