ಚಾಮರಾಜನಗರ: ರೈಸ್ ಪುಲ್ಲಿಂಗ್ ಧಂದೆ ಶಂಕೆ; ಹೋಂ ಸ್ಟೇಗೆ ಬೀಗ

Update: 2019-06-11 13:09 GMT

ಚಾಮರಾಜನಗರ, ಜೂ.11: ಬಿಳಿಗಿರಿರಂಗನಾಥ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರೈಸ್ ಪುಲ್ಲಿಂಗ್ ದಂಧೆಯ ಪ್ರಕರಣಕ್ಕೆ ಸಂಬಂದಿಸಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ರಾಜ್ಯ ವನ್ಯ ಜೀವಿ ಮಂಡಲಿ ಸದಸ್ಯ ಆರ್.ಮಲ್ಲೇಶಪ್ಪರವರ ಒಡೆತನದ ಹೋಂ ಸ್ಟೇಗೆ ಬೀಗ ಮುದ್ರೆ ಹಾಕಿದ್ದಾರೆ.

ಪ್ರವಾಸಿ ತಾಣ ಹಾಗೂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾಜ್ಯ ವನ್ಯ ಜೀವಿ ಮಂಡಲಿ ಸದಸ್ಯ ಆರ್.ಮಲ್ಲೇಶಪ್ಪ ಒಡೆತನದಲ್ಲಿ ಇರುವ ಹೋಂ ಸ್ಟೇ ಗೆ ಅತಿಥಿಗಳು ವಾಸ್ತವ್ಯ ಹೂಡಿ ಪ್ರಕೃತಿಯ ಸೊಬಗನ್ನು ಸವಿಯುತ್ತಿದ್ದರು. ಅದರಂತೆ ಕಳೆದ ಕೆಲವು ದಿನಗಳ ಹಿಂದೆ ಇದೇ ಹೋಂ ಸ್ಟೇ ನಲ್ಲಿ ಬೆಂಗಳೂರಿನ ಕೆಲವರು ವಾಸ್ಯವ್ಯ ಹೂಡಿದ್ದರು.

ಸೋಮವಾರ ಸಂಜೆಯ ವೇಳೆಗೆ ಕೆಲವು ವ್ಯಕ್ತಿಗಳು ಅನುಮಾನಸ್ಪದವಾಗಿ ಅಭಯಾರಣ್ಯದೊಳಗೆ ಸಂಚಾರ ಮಾಡುತ್ತಿದ್ದನ್ನು ಗಮನಿಸಿದ ಅಲ್ಲಿನ ನಿವಾಸಿಗಳು ಇಬ್ಬರನ್ನು ವಿಚಾರಣೆ ಮಾಡಿದಾಗ ಅವರ ಬಳಿ ಸಾಕಿದ ಸತ್ತ ಮೊಲಗಳು ಮತ್ತು ಗೋಜಲಕ್ಕಿ ಸಿಕ್ಕಿದ್ದವು. ಇದರೊಂದಿಗೆ ಪುರಾತನ ಕಾಲದ ಪಾತ್ರೆಯೊಂದು ಸಿಕ್ಕಿದ್ದು, ಅದು ರೈಸ್ ಪುಲ್ಲಿಂಗ್ ಎಂಬ ಸಂಶಯ ಉಂಟಾಗಿದೆ. ಇದನ್ನು ಮಾರಾಟ ಮಾಡಲು ಬಿಳಿಗಿರಿರಂಗನಬೆಟ್ಟದಲ್ಲಿ ಪ್ರಯತ್ನ ಮಾಡುತ್ತಿರುವ ಬಗ್ಗೆ ಅನುಮಾನ ಮೂಡಿದೆ.

ಕೂಡಲೇ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಇಬ್ಬರನ್ನು ಇಲಾಖೆಯ ವಶಕ್ಕೆ ಒಪ್ಪಿಸಿದರು. ಬಳಿಕ ಮಂಗಳವಾರ ಬಿಳಿಗಿರಿರಂಗನಾಥ ಬೆಟ್ಟಕ್ಕೆ ಯಳಂದೂರು ಎಸಿಎಫ್ ಅಸ್ಮಾನ್ ಆಗಮಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದರು, ಅಧಿಕಾರಿಗಳು ಕಾಟಾಚಾರಕ್ಕೆ ವಿಚಾರಣೆ ನಡೆಸುತ್ತಿದ್ದಾರೆ, ಇಡೀ ಪ್ರಕರಣದ ರುವಾರಿಯಾಗಿರುವ ರಾಜ್ಯ ವನ್ಯಜೀವಿ ಮಂಡಲಿ ಸದಸ್ಯ ಆರ್. ಮಲ್ಲೇಶಪ್ಪರವರನ್ನು ವಿಚಾರಣೆ ಒಳಪಡಿಸಿ ಎಂದು ಆಗ್ರಹಿಸಿ ಅರಣ್ಯ ಇಲಾಖಾ ಅಧಿಕಾರಿಗಳ ವಾಹನ ಮುಂದೆ ಪ್ರತಿಭಟನೆ ನಡೆಸಿದರು. 

ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ಅಧಿಕಾರಿಗಳು, ಮಲ್ಲೇಶಪ್ಪರವರ ಒಡೆತನದ ಹೋಂ ಸ್ಟೇ ಗೆ ತೆರಳಿ ಸ್ಥಳ ಮಹಜರು ನಡೆಸಿದರು, ಬಳಿಕ ಹೋಂ ಸ್ಟೇ ಗೆ ಬೀಗ ಮುದ್ರೆ ಹಾಕಿ, ಇಲಾಖಾ ವಿಚಾರಣೆಗೆ ಆಗಮಿಸುವಂತೆ ಮಲ್ಲೇಶಪ್ಪರವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News