ದಾವಣಗೆರೆ: 'ಸ್ವಚ್ಛ ಮೇವ ಜಯತೆ' ಆಂದೋಲನಕ್ಕೆ ಚಾಲನೆ

Update: 2019-06-11 13:21 GMT

ದಾವಣಗೆರೆ, ಜೂ.11: ಇಡೀ ಜಗತ್ತಿಗೆ ನಾಗರಿಕತೆ ಪರಿಚಯಿಸಿದ ಭಾರತೀಯರೇ ಇಂದು ಸ್ವಚ್ಛತೆಯ ಮಂತ್ರ ಜಪಿಸುತ್ತಿರುವುದು ಬೇಸರದ ಸಂಗತಿ ಎಂದು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳವಾರ ನಗರದ ಕುವೆಂಪು ಕನ್ನಡ ಭವನದಲ್ಲಿ ಜಿ.ಪಂ. ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛಮೇವ ಜಯತೆ ಆಂದೋಲನ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಭಾರತೀಯ ಸಂಸ್ಕೃತಿ ಹರಪ್ಪ, ಮೆಹಂಜದಾರೋ ನಾಗರಿಕತೆ ನೋಡಿದರೆ ಕಂಡುಬರುತ್ತದೆ. ಸಹಸ್ರ ವರ್ಷಗಳ ಹಿಂದೆ ಉತ್ಖನನಕ್ಕೆ ಒಳಗಾದ ಹಿಂದೂ ಸಂಸ್ಕೃತಿ ನೋಡಿದರೆ ಇಂದಿಗೂ ಅಲ್ಲಿ ಒಳಚರಂಡಿ ಮಾರ್ಗ, ಕಸತೊಟ್ಟಿ, ಅಡುಗೆ ಮನೆಗಳು, ಶಯನಗೃಹ, ಸ್ವಚ್ಛಂದ ಗಾಳಿ ಬೆಳಕು ಇರುವ ಕೊಠಡಿಗಳು ಕಂಡು ಬರುತ್ತವೆ. ಆರೋಗ್ಯಕರ ವಾತಾವರಣ ಇರುವ ಇತಿಹಾಸ ಪುರಾವೆ ಹೊಂದಿರುವ ನಾವು ಸ್ವಾತಂತ್ರ್ಯ ದಿನಗಳ ನಂತರವೂ ಹಿಂದುಳಿದಿದ್ದೇವೆ. ಇಂದಿಗೂ ನಾವು ಸ್ವಚ್ಛತೆಯ ಮಂತ್ರ ಜಪಿಸುತ್ತಿದ್ದೇವೆ. ಅಂದರೆ, ನಾಗರಿಕತೆಯ ಇತಿಹಾಸ ಹೊಂದಿರುವ ನಾವು ಎಲ್ಲಿ ಎಡವಿದ್ದೇವೆ ಎಂಬುದು ತಿಳಿಯುತ್ತಿಲ್ಲ ಎಂದರು.

ಎಲ್ಲಾ ನಾಗರಿಕತೆಗಳಿಗೆ ಮೂಲಾಧಾರವಾದ ನಮ್ಮದು ಪ್ರಥಮ ನಾಗರಿಕತೆ. ದುರಂತವೆಂದರೆ ಸ್ವಾತಂತ್ರ್ಯ ನಂತರ ಇಷ್ಟು ದಿನಗಳೂ ಸ್ವಚ್ಛತೆಯ ಬಗ್ಗೆ ಮಾತನಾಡುತ್ತೇವೆ. ನಮ್ಮ ಗ್ರಾಮ, ಮನೆ, ಅಂಗಳ ಸ್ವಚ್ಛವಾಗಿಡುತ್ತವೆ ಪರಿಸರ ಮಲಿನಗೊಳಿಸುವುದಿಲ್ಲ ಎಂಬ ಪ್ರತಿಜ್ಞೆ ಹೊಂದುತ್ತೇವೆ ಎಂದು ಹೇಳುವ ತಪ್ಪಿತಸ್ಥ ಮನೋಭಾವ ಹೊಂದಿದ್ದೇವೆ. ಇಂದು ಗ್ರಾಮೀಣ ಭಾಗದ ಜನರನ್ನು ಗಮನಿಸಿದರೆ ನಮ್ಮ ಮಹಿಳೆಯರಿಗೆ ಶೌಚಾಲಯ ನಿರ್ಮಾಣ ಮಾಡುವ ಪ್ರಯತ್ನದಲ್ಲಿದ್ದೇವೆ ಇದು ಶೋಚನೀಯ ಎಂದರು.

ಕೇವಲ ಕಾನೂನು, ಪ್ರತಿಜ್ಞೆ, ಸಮಾವೇಶ, ಪ್ರಚಾರ ಮಾಡುವುದರಿಂದ ಸ್ವಚ್ಛತೆ ಸಾಧ್ಯವಿಲ್ಲ. ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸ್ವಚ್ಛತೆಯ ಗಾಳಿ ಬೀಸಬೇಕು. ಆಗ ಸ್ವಚ್ಛ ಮೇವ ಜಯತೆಗೆ ಅರ್ಥ ಬರುತ್ತದೆ ಎಂದರು.

ಜಿ.ಪಂ ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಕಾರ್ಯಕ್ರಮಗಳು ನಮಗೆ ಸಂತೋಷ ಕೊಡುವುದಿಲ್ಲ. ಅವು ನಮ್ಮನ್ನು ಟೀಕೆ ಮಾಡಿದಂತಿರುತ್ತದೆ. ಪ್ರಕೃತಿ ರಕ್ಷಣೆ ಎನ್ನುವುದು ಕೇವಲ ಬರ್ಹಿದೆಸೆಯಿಂದ ಮಾತ್ರವಲ್ಲ. ಅದು ಎಲ್ಲಾ ಹಂತದಲ್ಲಾಗಬೇಕು. ಪರಿಸರ ಉಳಿಸುವಲ್ಲಿ ಗ್ರಾಮೀಣ ಪ್ರದೇಶದ ಜನರ ಜವಾಬ್ದಾರಿ ಎಷ್ಟಿದೆಯೋ ಅಷ್ಟೇ ನಗರವಾಸಿಗಳದ್ದು ಇರಬೇಕು. ನಗರದ ಜೀವನಶೈಲಿಯಿಂದ ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ಗ್ರಾಮೀಣ ಮತ್ತು ನಗರ ಬದುಕು ಎರಡು ಜೊತೆ ಜೊತೆಯಾಗಿ ಪರಿಸರದ ಬಗ್ಗೆ ಚಿಂತನೆ ಮಾಡಬೇಕು. ಆಗ ನಾವು ಪರಿಸರ ಸಂರಕ್ಷಣೆ ಮಾಡಲು ಸಾಧ್ಯವಿರುತ್ತದೆ ಎಂದ ಅವರು, ಸ್ವಚ್ಛತೆ ಎಂದರೆ ಅದು ಗ್ರಾಮೀಣ ಪ್ರದೇಶಕ್ಕೆ ಮಾತ್ರ ಅನ್ವಯವಲ್ಲ. ಬಹಿರ್ದೆಸೆ ಹಾಗೂ ಕಾರ್ಖಾನೆ ಇವೆರಡರಲ್ಲಿ ಕಾರ್ಖಾನೆಯಿಂದಲೇ ಹೆಚ್ಚು ಪರಿಸರ ಹಾಳಾಗುತ್ತದೆ, ಆರೋಗ್ಯ ಹಾಳಾಗುತ್ತದೆ ಎಂಬುದನ್ನು ಯಾಕೆ ಅರಿಯುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ ಅಧ್ಯಕ್ಷೆ ಶೈಲಜಾ ಬಸವರಾಜ್, ತಾ.ಪಂ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಜಿ.ಪಂ ಉಪಾಧ್ಯಕ್ಷ ಸುರೇಂದ್ರನಾಯ್ಕ್, ಎಂ.ಆರ್.ಮಹೇಶ್, ಉಮಾ ವೆಂಕಟೇಶ್, ಸಾಕಮ್ಮ ಗಂಗಾಧರ್ ನಾಯ್ಕ್, ಶಾಂತಕುಮಾರಿ, ಭೀಮಾನಾಯ್ಕ್, ಶಾಂತಭಟ್ ಸೇರಿದಂತೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News