"ಏಕ ವಚನದಲ್ಲಿ ಮಾತಾಡ್ಬೇಡಿ, ಆ್ಯಕ್ಷನ್ ತೆಗೆಯಬೇಕಾಗುತ್ತೆ"

Update: 2019-06-11 14:12 GMT

ಶಿವಮೊಗ್ಗ, ಜೂ. 11: "ಸುಮ್ನೆ ಹಂಗೆ ಮಾತಾಡ್‍ಬಾರ್ದು ಸಾರ್. ಏಕವಚನದಲ್ಲಿ ಮಾತಾಡ್ಬೇಡಿ. ನಾವು ನಿಮಗೆ ಗೌರವ ಕೊಡುತ್ತಿಲ್ವಾ? ಸರಿಯಾಗಿ ಮಾತಾಡಿ. ಇಲ್ಲದಿದ್ದರೆ ನಿಮ್ಮ ವಿರುದ್ಧ ಆ್ಯಕ್ಷನ್ ತೆಗೆಯಬೇಕಾಗುತ್ತೆ" ಇದು, ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್‍ರವರು ಬಿಜೆಪಿಯ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ವಿರುದ್ಧ, ಸಾರ್ವಜನಿಕವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣರವರ ಸಮ್ಮುಖದಲ್ಲಿ ವ್ಯಕ್ತಪಡಿಸಿದ ಆಕ್ರೋಶ ಭರಿತ ಮಾತುಗಳು. 

ಮೊದಲೇ ಕೋಪದಿಂದ ಮಾತನಾಡುತ್ತಿದ್ದ ಆಯನೂರು ಮಂಜುನಾಥ್, ಆಯುಕ್ತೆಯ ತಿರುಗೇಟಿಗೆ ಮತ್ತಷ್ಟು ವ್ಯಗ್ರರಾದರು. 'ಅದೇನೋ ಆ್ಯಕ್ಷನ್ ತಗೋತಿಯೋ ತಗೋಳಮ್ಮ' ಎಂದು ಜಗಳಕ್ಕೆ ನಿಂತರು. ಅಷ್ಟರಲ್ಲಿಯೇ ಸಚಿವ ಡಿ.ಸಿ.ತಮ್ಮಣ್ಣರವರೇ ಮಧ್ಯಪ್ರವೇಶಿಸಿ, ಎಂಎಲ್‍ಸಿ ಹಾಗೂ ಆಯುಕ್ತೆಯನ್ನು ಸಮಾಧಾನಗೊಳಿಸಿದರು. ಪರಿಸ್ಥಿತಿಯನ್ನು ತಿಳಿಗೊಳಿಸಿದರು. 

ಆಯನೂರು ಹಾಗೂ ಆಯುಕ್ತೆಯ ನಡುವೆ ನಡೆದ ಈ ವಾಕ್ಸಮರಕ್ಕೆ ಶಾಸಕ ಕೆ.ಎಸ್.ಈಶ್ವರಪ್ಪ, ಎಂಎಲ್‍ಸಿ ಆರ್.ಪ್ರಸನ್ನಕುಮಾರ್, ಪಾಲಿಕೆಯ ಮೇಯರ್, ಸದಸ್ಯರು, ಉಪ ಮೇಯರ್, ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಸೇರಿದಂತೆ ಇತರೆ ಅಧಿಕಾರಿ ವರ್ಗ ಹಾಗೂ ಸಾರ್ವಜನಿಕರು ಸಾಕ್ಷಿಯಾದರು. ಸಚಿವರು ಹೊರತುಪಡಿಸಿದರೆ, ಯಾರೊಬ್ಬರೂ ಇವರನ್ನು ಸಮಾಧಾನಗೊಳಿಸಲು ಮುಂದಾಗಲಿಲ್ಲ.  

ಏನಾಯ್ತು?: ಹಲವು ದಿನಗಳ ನಂತರ ಜಿಲ್ಲಾ ಉಸ್ತುವಾರಿ ಸಚಿವರು ನಗರಕ್ಕೆ ಭೇಟಿ ನೀಡಿದ್ದರು. ಸ್ಮಾರ್ಟ್ ಸಿಟಿಯಡಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಶರಾವತಿ ನಗರದ ಆದಿಚುಂಚನಗಿರಿ ಶಾಲೆಯ ಬಳಿ ನಡೆಯುತ್ತಿರುವ ಕಾಮಗಾರಿ ವೀಕ್ಷಣೆ ನಡೆಸುತ್ತಿದ್ದ ವೇಳೆ, ಆಯನೂರು ಮಂಜುನಾಥ್‍ರವರು ಮೂಲಸೌಕರ್ಯ ಹಾಗೂ ಬೀದಿ ದೀಪಗಳ ವಿಷಯಕ್ಕೆ ಸಂಬಂಧಿಸಿದಂತೆ ಆಯುಕ್ತೆಯನ್ನು ಪ್ರಶ್ನಿಸಲಾರಂಭಿಸಿದರು.

'ಸ್ಮಾರ್ಟ್ ಸಿಟಿ ಕಾಮಗಾರಿ ನೆಪದಲ್ಲಿ ಜನರಿಗೆ ತೊಂದರೆ ಆಗುತ್ತಿದೆ. ಜನರಿಗೆ ಕೆಲಸ ಮಾಡಿಕೊಡಿ ಅಂದರೆ ಮಾಡಿಕೊಡುತ್ತಿಲ್ಲ. ಬೀದಿ ದೀಪವಿರುವ ಕಂಬಗಳಲ್ಲಿ ಲೈಟ್‍ಗಳಿಲ್ಲ. ಪ್ರತಿಯೊಂದಕ್ಕೂ ಕಾಮಗಾರಿ ನೆಪ ಹೇಳುತ್ತೀರಿ. ಒಂದು ರಾತ್ರಿ ನೀವು ಆ ಜಾಗದಲ್ಲಿ ಇದ್ದು ನೋಡಿ. ಬರೀ ಕಥೆ ಕೇಳಲು ಇದ್ದೇವಾ? ಸುಮ್ನೆ ಮಾತಾಡಬೇಡಿ' ಎಂದು ಏರು ಧ್ವನಿಯಲ್ಲಿ ಆಯುಕ್ತೆ ವಿರುದ್ಧ ಹರಿಹಾಯ್ದರು. 

ಇದಕ್ಕೆ ಆಯುಕ್ತೆ ಪ್ರತಿಕ್ರಿಯೆ ನೀಡಿ, 'ಸಾರ್ ಸುಮ್ನೆ ಹಂಗೆಲ್ಲ ಮಾತಾಡ್ಬಾರ್ದು. ನಾವು ಕೆಲಸ ಮಾಡುತ್ತಿದ್ದೇವೆ' ಎಂದರು. 'ನೀವು ಜನರ ಸಮಸ್ಯೆ ಕೇಳುತ್ತಿಲ್ಲ. ನಿಮಗೆ ಮರ್ಯಾದೆ ಬೇಕು. ಜನರು ಸಾಯಬೇಕಾ? ಹಾಗಾದ್ರೆ ಸಮಸ್ಯೆ ಪರಿಹರಿಸು ನೀನು' ಎಂದರು. 

ಇದಕ್ಕೆ ತಾಳ್ಮೆ ಕಳೆದುಕೊಂಡು ಆಯುಕ್ತೆ, 'ಏಕವಚನದಲ್ಲಿ ಮಾತಾಡ್ಬೇಡಿ. ಸರಿಯಾಗಿ ಮಾತಾಡಿ. ಇಲ್ಲದಿದ್ದರೆ ನಿಮ್ಮ ವಿರುದ್ಧ ಆ್ಯಕ್ಷನ್ ತಗೋಬೇಕಾಗುತ್ತೆ.. ಎಂದು ಆಕ್ರೋಶ ವ್ಯಕ್ತಪಡಿಸಿದರು. 'ಯಾರೋ ಕಾರ್ಪೋರೇಟರ್ ಅಲ್ಲ ಬೆದರಿಕೆ ಹಾಕೋಕೆ. ತಗೋ ಆ್ಯಕ್ಷನ್. ನಾನೂ ನೋಡ್ತಿನಿ..' ಎಂದು ಆಯನೂರು ಗುಡುಗಿದರು. ಸಚಿವ ಡಿ.ಸಿ.ತಮ್ಮಣ್ಣರವರು ಮಧ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನ ಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News