ಸರಕಾರ ಬಿದ್ದರೆ, ನಾವು ರಚಿಸಲು ಮುಂದಾಗುತ್ತೇವೆ: ಜಗದೀಶ್ ಶೆಟ್ಟರ್
Update: 2019-06-11 20:06 IST
ರಾಯಚೂರು, ಜೂ,11: ರಾಜ್ಯದ ಮೈತ್ರಿ ಸರಕಾರ ಅಪವಿತ್ರ ಮೈತ್ರಿ ಕೂಟವಾಗಿದೆ. ಹೀಗಾಗಿ ಅವರವರೇ ಕಚ್ಚಾಡಿಕೊಂಡು ಸರಕಾರ ಬಿದ್ದರೆ ನಾವು ಸರಕಾರ ರಚಿಸಲು ಮುಂದಾಗುತ್ತೇವೆಂದು ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಮಂಗಳವಾರ ಲಿಂಗಸಗೂರಿನಲ್ಲಿ ಮಾತನಾಡಿದ ಅವರು, ಮೈತ್ರಿ ಸರಕಾರದ ಆಡಳಿತ ಯಂತ್ರ ಸಂಪೂರ್ಣ ವಿಫಲವಾಗಿದೆ. ಬರ ನಿರ್ವಹಣೆ ಮಾಡುವಲ್ಲಿಯೂ ಸಂಪೂರ್ಣ ವಿಫಲವಾಗಿದೆ. ಸಾಲಮನ್ನಾ ಬರೀ ಹೆಸರಿಗೆ ಮಾತ್ರವೇ ಆಗಿದ್ದು, ಪೇಪರಿನಲ್ಲಿ ಮಾತ್ರ ಉಳಿದಿದೆ ಎಂದು ಆರೋಪಿಸಿದರು.
ರಾಜ್ಯ ಸರಕಾರ ಸುಳ್ಳು ಭರವಸೆಯಿಂದ ಅಧಿಕಾರ ನಡೆಸುತ್ತಿದ್ದು, ಎಲ್ಲರೂ ಮಂತ್ರಿಗಿರಿಗಾಗಿ ಪರಸ್ಪರ ಕಚ್ಚಾಡುತ್ತಿದ್ದಾರೆ. 14ರಂದು ಸಂಪುಟ ಮರು ರಚಿಸುವುದಾಗಿ ಹೇಳುತ್ತಿದ್ದು, ಇದರಿಂದ ಜೇನುಗೂಡಿಗೆ ಕೈಹಾಕಿದಂತಾಗಲಿದೆ. ಇದರಿಂದಾಗಿ ಸಂಪುಟ ವಿಸ್ತರಣೆಯ ನಂತರ ಭಿನ್ನಮತ ಮತ್ತಷ್ಟು ಹೆಚ್ಚಲಿದೆ ಎಂದು ಅವರು ತಿಳಿಸಿದರು.