ಐಎಂಎ ವಂಚನೆ ಪ್ರಕರಣ: ಎಷ್ಟೇ ಪ್ರಭಾವಿಗಳಿದ್ದರೂ ಕಠಿಣ ಕ್ರಮ- ಗೃಹ ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು, ಜೂ.11: ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳು ಶಾಮೀಲಾಗಿದ್ದರೂ ಅವರ ವಿರುದ್ಧ ಮುಲಾಜಿಲ್ಲದೇ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ತನಿಖೆಯಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಐಎಂಎ ಸಂಸ್ಥೆಯ ಮುಹಮ್ಮದ್ ಮನ್ಸೂರ್ ಖಾನ್ ಕಳುಹಿಸಿರುವ ಆಡಿಯೋ ಸಂದೇಶ ಹರಿದಾಡುತ್ತಿದ್ದಂತೆ ಹೂಡಿಕೆದಾರರಲ್ಲಿ ಆತಂಕ ಮನೆ ಮಾಡಿದೆ ಎಂದರು. ಐಎಂಎ ಬಡ್ಡಿ ರಹಿತವಾದ ಹಣಕಾಸು ಸಂಸ್ಥೆ ಎಂದು ಬಿಂಬಿಸಿಕೊಂಡಿತ್ತು. ಅವರು ಎಲ್‌ಎಲ್‌ಪಿ ಅಡಿಯಲ್ಲಿ ಹೂಡಿಕೆದಾರರಿಂದ ಪಡೆದ ಹಣವನ್ನು ನಿಶ್ಚಿತ ಠೇವಣಿಯ ಬದಲಾಗಿ, ಅವರನ್ನು ಶೇರುದಾರರು ಎಂದು ಪರಿವರ್ತನೆ ಮಾಡಿಕೊಂಡಿದ್ದರು ಎಂದು ಎಂ.ಬಿ.ಪಾಟೀಲ್ ಹೇಳಿದರು.
ಶೇರು ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ಸೇರಿದಂತೆ ಇನ್ನಿತರ ವ್ಯಾಪಾರ ವಹಿವಾಟು ಮಾಡುತ್ತೇವೆ. ಅದರಲ್ಲಿ ಬರುವ ಲಾಭಾಂಶವನ್ನು ನಾವು ನಿಮಗೆ ಹಂಚಿಕೆ ಮಾಡುತ್ತೇವೆ ಎಂದು ಐಎಂಎ ಹೇಳಿಕೊಂಡಿತ್ತು. ಈ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಿನ್ನೆ ಡಿಜಿಪಿ, ನಗರ ಪೊಲೀಸ್ ಆಯುಕ್ತರು ಸೇರಿದಂತೆ ಉನ್ನತಮಟ್ಟದ ಅಧಿಕಾರಿಗಳೆಲ್ಲ ಹೂಡಿಕೆದಾರರಿಗೆ ದೂರು ನೀಡಲು ವ್ಯವಸ್ಥೆ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಇದೊಂದು ಗಂಭೀರವಾದ ಪ್ರಕರಣ, ಈ ಹಿಂದೆ ಅಗ್ರಿಗೋಲ್ಡ್, ಇಂಜಾಝ್, ಆ್ಯಂಬಿಡೆಂಟ್ ಸೇರಿದಂತೆ ಇನ್ನಿತರ ಕಂಪೆನಿಗಳ ವಂಚನೆಗೆ ಸಂಬಂಧಿಸಿದಂತೆ ಸಿಸಿಬಿಯಲ್ಲಿ 7 ಪ್ರಕರಣಗಳು, ಸಿಐಡಿ ಬಳಿ 17 ಪ್ರಕರಣಗಳು ಬಾಕಿಯಿವೆ ಎಂದು ಎಂ.ಬಿ.ಪಾಟೀಲ್ ವಿವರಣೆ ನೀಡಿದರು.
ಇಂತಹ ಸಂಸ್ಥೆಗಳು ಸಹಕಾರ ಇಲಾಖೆಯ ರಿಜಿಸ್ಟ್ರಾರ್, ರಿಜಿಸ್ಟ್ರಾರ್ ಆಫ್ ಕಂಪೆನಿಸ್ ಸೇರಿದಂತೆ ಇನ್ನಿತರೆಡೆ ವ್ಯಾಪಾರ, ವಹಿವಾಟುಗಳನ್ನು ನಡೆಸಲು ಅನುಮತಿ ಪಡೆದಿರುತ್ತಾರೆ. ವಂಚನೆಗೆ ಸಂಬಂಧಿಸಿದ ದೂರು ಬಂದ ಬಳಿಕ ಪೊಲೀಸರು ಪರಿಶೀಲಿಸುತ್ತಾರೆ ಎಂದು ಅವರು ಹೇಳಿದರು. ಈ ಪ್ರಕರಣ ಬೆಳಕಿಗೆ ಬಂದ ನಂತರ ಇವತ್ತು ಪೊಲೀಸ್ ಇಲಾಖೆಯ ಉನ್ನತಮಟ್ಟದ ಅಧಿಕಾರಿಗಳಾದ ಡಿಜಿಪಿ, ಸಿಐಡಿ, ಗೃಹ ಇಲಾಖೆಯ ಕಾರ್ಯದರ್ಶಿ, ಗುಪ್ತಚರ ಇಲಾಖೆಯ ಮುಖ್ಯಸ್ಥರು ಸೇರಿದಂತೆ ಇನ್ನಿತರ ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ನಾನು ಸಭೆ ಮಾಡಿ ಚರ್ಚೆ ನಡೆಸಿದ್ದೇನೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ಐಎಂಎ ಸಂಸ್ಥೆಯ ಆಭರಣ ಮಳಿಗೆಗಳನ್ನು ಜಪ್ತಿ ಮಾಡಿದ್ದೇವೆ. ಚರಾಸ್ತಿಗಳಾದ ಚಿನ್ನಾಭರಣ ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿದ್ದೇವೆ. ಆಸ್ತಿ ಪಾಸ್ತಿ ಗುರುತಿಸಿ, ನಾವು ತನಿಖೆ ಮಾಡುತ್ತೇವೆ. ಮುಖ್ಯಮಂತ್ರಿ ಈಗಾಗಲೇ ಎಸ್‌ಐಟಿ ರಚನೆ ಮಾಡಲು ಆದೇಶಿಸಿದ್ದಾರೆ. ಸಮಿತಿಯಲ್ಲಿ ಯಾರು ಸದಸ್ಯರು ಇರಬೇಕು ಎಂಬುದರ ಕುರಿತು ನಂತರ ತೀರ್ಮಾನ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಶೇರುದಾರರಾಗಿ ಪರಿವರ್ತನೆಯಾಗಿರುವ ಹೂಡಿಕೆದಾರರ ವ್ಯವಹಾರವೆಲ್ಲ ಬ್ಯಾಂಕ್ ಮೂಲಕ ಆಗಿದೆ. ಈ ಹಿನ್ನೆಲೆಯಲ್ಲಿ ವಿವರವನ್ನು ಕಲೆ ಹಾಕುವ ಕೆಲಸ ನಡೆಯುತ್ತಿದೆ. ಎಷ್ಟು ಜನ ಹೂಡಿಕೆ ಮಾಡಿದ್ದಾರೆ ಎಂಬುದರ ವಿವರ ಶೀಘ್ರವೇ ಲಭ್ಯವಾಗಲಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
ವಂಚನೆ ಮಾಡುವ ಸಂಸ್ಥೆಗಳ ಆಸ್ತಿಗಳನ್ನು ಅಟಾಚ್ಡ್ ಮಾಡಲು ತಮಿಳುನಾಡು ಮಾದರಿಯಲ್ಲಿ ಕಾಯ್ದೆ ಜಾರಿಗೆ ತರಲು ತೀರ್ಮಾನ ಮಾಡಿದ್ದೇವೆ. ಈ ಹಿಂದಿನ ಸರಕಾರದ ಅವಧಿಯಲ್ಲಿ ಈ ಪ್ರಯತ್ನ ನಡೆದಿತ್ತು. ಅದು ಪೊಲೀಸ್ ಕಾಯ್ದೆಗೆ ಮಾತ್ರ ಸೀಮಿತವಾಗಿತ್ತು ಎಂದು ಅವರು ಪ್ರಶ್ನೆಯೊಂದಕ್ಕೆ ತಿಳಿಸಿದರು.
ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಪೊಲೀಸ್ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರ ಸಭೆ ಕರೆದು, ಇಂತಹ ಘಟನೆಗಳು ಮರುಕಳಿಸದಂತೆ, ಅಂತ್ಯ ಹಾಡಬೇಕು. ಅದಕ್ಕಾಗಿ, ಇಂತಹ ಸಂಸ್ಥೆಗಳ ಆರಂಭಿಸುವಾಗ ಅನುಮತಿ ಕೊಡುವಾಗ ಅನುಸರಿಸಬೇಕಾದ ಮಾನದಂಡಗಳು ಹೇಗಿರಬೇಕು. ಅದಕ್ಕೆ ಇರುವ ಅಡೆತಡೆಗಳೇನು, ಅದನ್ನು ನಿವಾರಿಸಲು ಏನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಪರಿಶೀಲನೆ ಮಾಡಿ ತೀರ್ಮಾನ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಪ್ರಮುಖವಾಗಿ ಜನರಲ್ಲಿ ಇಂತಹ ಸಂಸ್ಥೆಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ನಿನ್ನೆವರೆಗೆ ಐಎಂಎ ವಿರುದ್ಧ 3500 ದೂರುಗಳು ದಾಖಲಾಗಿವೆ. ಆಡಿಯೋ ಸಂದೇಶದ ಸತ್ಯಾಸತ್ಯತೆ ಕುರಿತು ಪರಿಶೀಲನೆ ನಡೆಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.