ರೋಷನ್ ಬೇಗ್, ಝಮೀರ್ ಹೆಸರು ಕೇಳಿ ಬಂದ ಕಾರಣ ಈಡಿ ಅಥವಾ ಸಿಬಿಐ ತನಿಖೆ ನಡೆಯಲಿ: ಶೋಭಾ ಕರಂದ್ಲಾಜೆ

Update: 2019-06-11 15:12 GMT

ಬೆಂಗಳೂರು, ಜೂ.11: ಐಎಂಎ ಸಮೂಹ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಮನ್ಸೂರ್ ಖಾನ್‌ಗೆ ಭಯೋತ್ಪಾದಕರ ಜತೆಗೆ ನಂಟಿರುವ ಸಂಶಯವಿದ್ದು, ಈ ಪ್ರಕರಣದಲ್ಲಿ ರೋಷನ್ ಬೇಗ್, ಝಮೀರ್ ಅಹ್ಮದ್ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸಿಬಿಐ ಅಥವಾ ಈಡಿ ತನಿಖೆಗೆ ವಹಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನ್ಸೂರ್‌ಗೆ ಭಯೋತ್ಪಾದಕರೊಂದಿಗೆ ನಂಟಿದೆ. ಇಲ್ಲದಿದ್ದರೆ ಅವರಿಗೆ ಹಣ ಎಲ್ಲಿಂದ ಬಂತು. ಈ ಸಂಬಂಧ ಸಮಗ್ರವಾದ ತನಿಖೆ ನಡೆಯಬೇಕು. ಎಸ್‌ಐಟಿಯಿಂದ ಸಮಗ್ರ ತನಿಖೆ ಅಸಾಧ್ಯ ಎಂದು ಅನುಮಾನ ವ್ಯಕ್ತಪಡಿಸಿದರು.

ಒಂದು ವರ್ಷದ ಹಿಂದೆಯೇ ಕೇರಳದ ನಮ್ಮ ಕಾರ್ಯಕರ್ತರೊಬ್ಬರು ಪಿಎಫ್‌ಐಗೆ ಐಎಂಎ ಮೂಲಕ ಹಣಕಾಸು ರವಾನೆ ಆಗುತ್ತಿದೆ ಎಂದಿದ್ದರು. ಈ ಬಗ್ಗೆ ನನಗೆ ಗೊತ್ತಿರುವ ಕೆಲವರಿಗೆ ಜಾಗೃತಿ ಮೂಡಿಸಿದ್ದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜೊತೆ ಮನ್ಸೂರ್ ಖಾನ್ ನಂಟಿತ್ತು ಎನ್ನುವ ಮಾತು ಕೇಳಿ ಬಂದಿತ್ತು. ಹೀಗಾಗಿ, ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಅವರು ಆಗ್ರಹಿಸಿದರು.

ಸಿಎಂ ರಾಜೀನಾಮೆ ನೀಡಲಿ: ರೈತರ ಸಾಲಮನ್ನಾ ಹಣ ವಾಪಸ್ ಹೋಗಿರುವ ವಿಚಾರವೂ ಐಎಂಎ ಜ್ಯುವೆಲ್ಸ್ ಗ್ರಾಹಕರಿಗೆ ಮೋಸ ಮಾಡಿದಂತೆಯೇ ಆಗಿದೆ. 49 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡ್ತೀನಿ ಎಂದು ಚುನಾವಣಾ ಸಮಯದಲ್ಲಿ ಹೇಳಿದ್ದ ಸಿಎಂ ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿದ್ದರು. ಆದರೆ ಚುನಾವಣೆ ಮುಗಿದ ಮೇಲೆ ಹಣ ವಾಪಸ್ ತಗೋತಾರೆ ಅಂದ್ರೆ ಏನು ಅರ್ಥ ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಶೋಭಾ ಒತ್ತಾಯ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News