ಜಿಂದಾಲ್ ಕಂಪೆನಿಗೆ ಭೂಮಿ ಮಾರಾಟ ಮಾಡಬೇಡಿ: ಎಸ್.ಆರ್.ಹಿರೇಮಠ್ ಆಗ್ರಹ

Update: 2019-06-11 16:42 GMT

ಬೆಂಗಳೂರು, ಜೂ.11: ಜಿಂದಾಲ್ ಕಂಪೆನಿಗೆ ಭೂಮಿ ಮಾರಾಟ ಮಾಡುವ ಬದಲಿಗೆ ಗುತ್ತಿಗೆ ಆಧಾರದಲ್ಲಿ ನೀಡಬೇಕು ಎಂದು ಸಮಾಜ ಪರಿವರ್ತನಾ ವೇದಿಕೆಯ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಆಗ್ರಹಿಸಿದ್ದಾರೆ.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಂದಾಲ್ ಸ್ಟೀಲ್ ಕಂಪನಿಗೆ ರಾಜ್ಯ ಸರಕಾರ 3667 ಎಕರೆ ಭೂಮಿಯನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವುದು ಸಲ್ಲದು. ಇದರ ಬದಲು ಗುತ್ತಿಗೆ ನೀಡುವುದು ಸೂಕ್ತ ಎಂದು ಹೇಳಿದರು.

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತರ ವರದಿಯಲ್ಲಿ ಜಿಂದಾಲ್ ಕಂಪೆನಿಯ ಹೆಸರಿದೆ. ಅಲ್ಲದೆ, ಸರಕಾರಿ ಸ್ವಾಮ್ಯದ ಮಿನರಲ್ ಕಂಪೆನಿಗೆ ಜಿಂದಾಲ್‌ನಿಂದ ಕೋಟ್ಯಂತರ ರೂ.ಗಳು ಹಣ ಬಾಕಿಯಿದೆ. ಅಂತಹ ಕಂಪನಿಗೆ ಸಾವಿರಾರು ಎಕರೆ ಭೂಮಿಯನ್ನು ಸರಕಾರ ಕಡಿಮೆ ಬೆಲೆಗೆ ನೀಡುತ್ತಿರುವುದು ಸರಿಯಲ್ಲ ಎಂದರು.

ಒಪ್ಪಂದ ಪ್ರಕಾರ ಜಮೀನನ್ನು ನೀಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾದರೆ ಅದನ್ನು 99 ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ನೀಡಬೇಕು, ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು. ಒಂದು ವೇಳೆ ಹಾಗೆ ಮಾಡಿದರೆ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

ಸರಕಾರದ ನಿರ್ಧಾರದ ವಿರುದ್ಧ ಈಗಾಗಲೇ ರಾಜಕೀಯ ಪಕ್ಷಗಳು ಮತ್ತು ಕೆಲವು ಸಂಘ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ. ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಅಹೋರಾತ್ರಿ ಧರಣಿ ಮಾಡುವುದಾಗಿ ಎಚ್ಚರಿಕೆಯನ್ನು ನೀಡಲಾಗಿದೆ. ಈ ಧರಣಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಧರಣಿಯು ಕಾಟಾಚಾರದ ಧರಣಿಯಾಗಬಾರದು. ಉದ್ಧಟತನದಿಂದ ನಡೆದುಕೊಳ್ಳುತ್ತಿರುವ ಜಿಂದಾಲ್ ಕಂಪೆನಿಗೆ ತಕ್ಕ ಪಾಠ ಕಲಿಸುವಂತಿರಬೇಕು ಎಂದು ನುಡಿದರು.

ಸುಪ್ರೀಂಕೋರ್ಟ್‌ನ ಹಿಂದಿನ ಅನೇಕ ಆದೇಶವನ್ನು ಗಮನಿಸಿದರೆ ಸರಕಾರದ ನಿರ್ಧಾರ ಮೇಲ್ನೋಟಕ್ಕೆ ಸರಿ ಎನಿಸುವುದಿಲ್ಲ. ಈ ಸಂಬಂಧದ ಬಗ್ಗೆ ಈಗಾಗಲೇ ನಾವು ಹಲವು ದಾಖಲೆಗಳನ್ನು ಕಲೆ ಹಾಕಿದ್ದೇವೆ. ರಾಜ್ಯದ ಹಿತದೃಷ್ಟಿಯಿಂದ ಸರಕಾರ ತನ್ನ ನಿರ್ಧಾರದಿಂದ ಕೂಡಲೇ ಹಿಂಜರಿಯಬೇಕು. ಇಲ್ಲದಿದ್ದರೆ ಹಂತಹಂತವಾಗಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಚಂದ್ರಶೇಖರ್ ಮೇಟಿ, ಐ.ಜಿ ಪುಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News