ಒಬಿಸಿ ಪಟ್ಟಿಯಲ್ಲಿ ಮುಸ್ಲಿಂ ಉಪಜಾತಿಗಳನ್ನು ಸೇರಿಸಲು ಕೋರಿ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್

Update: 2019-06-11 16:53 GMT

ಬೆಂಗಳೂರು, ಜೂ.11: ಕರ್ನಾಟಕಕ್ಕೆ ಸಂಬಂಧಿಸಿದಂತೆ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಮುಸ್ಲಿಂ ಧರ್ಮದ ಎಲ್ಲ ಉಪಜಾತಿ ಹೆಸರುಗಳನ್ನು ಸೇರಿಸುವಂತೆ ಕೇಂದ್ರ ಸರಕಾರಕ್ಕೆ ಆದೇಶಿಸಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಂಗಳವಾರ ಹೈಕೋರ್ಟ್ ವಜಾಗೊಳಿಸಿದೆ.

ಈ ಕುರಿತು ನಗರದ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಅರೀಫ್ ಜಮೀಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ವಿಚಾರಣೆ ವೇಳೆ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಧೀನ ಕಾರ್ಯದರ್ಶಿ ಅವರ ಪ್ರಮಾಣ ಪತ್ರವನ್ನು ಸಹಾಯಕ ಸಾಲಿಸಿಟರ ಜನರಲ್ ಸಿ.ಶಶಿಕಾಂತ್ ಅವರು ನ್ಯಾಯಪೀಠಕ್ಕೆ ಸಲ್ಲಿಸಿದರು. ಅರ್ಜಿದಾರರ ಕೋರಿಕೆ ಮಾನ್ಯ ಮಾಡಲು ಆಗದು ಎಂಬ ವಿವರಣೆಯ ಪ್ರಮಾಣ ಪತ್ರವನ್ನು ಮಾನ್ಯ ಮಾಡಿದ ನ್ಯಾಯಪೀಠ ಅರ್ಜಿ ವಜಾಗೊಳಿಸಿತು.

ಪ್ರಕರಣವೇನು: ರಾಜ್ಯದಲ್ಲಿ ಸಂಬಂಧಪಟ್ಟ ತಹಶೀಲ್ದಾರ್ ಅವರು ಮುಸ್ಲಿಂ ಧರ್ಮದ 17 ಉಪ ಜಾತಿಗಳ ಸಂಬಂಧ ಪ್ರವರ್ಗ 2ಬಿ ಜಾತಿ ಪ್ರಮಾಣಪತ್ರ ನೀಡುತ್ತಿಲ್ಲ. ಈ ಕುರಿತಂತೆ ಅಲ್ಪಸಂಖ್ಯಾತ ಆಯೋಗಕ್ಕೆ ಮನವಿ ಪತ್ರ ಸಲ್ಲಿಸಿದರೆ, ಅದನ್ನು ಕೇಂದ್ರ ಅಲ್ಪಸಂಖ್ಯಾತ ಆಯೋಗಕ್ಕೆ ಕಳುಹಿಸಲಾಗುತ್ತಿದೆ. ನಾಲ್ಕು ವರ್ಷದಿಂದ ಇದೇ ನಡೆಯುತ್ತಿದೆ ಹೊರತು ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ. ಹೀಗಾಗಿ, ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಮುಸ್ಲಿಂ ಧರ್ಮದಲ್ಲಿನ ಎಲ್ಲ ಉಪ ಜಾತಿಗಳನ್ನು ಸೇರಿಸಲು ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು.

ರಾಜ್ಯ ಸರಕಾರ ಸಿದ್ಧಪಡಿಸಿರುವ ಪ್ರವರ್ಗ 2ಬಿ ಪಟ್ಟಿಯಲ್ಲಿ ಮುಸ್ಲಿಂ ಧರ್ಮದ 17ಉಪಜಾತಿಗಳನ್ನು ಸೇರಿಸಲಾಗಿದೆ. ಆದರೆ, ಕೇಂದ್ರ ಸರಕಾರದ ಒಬಿಸಿ ಪಟ್ಟಿಯಲ್ಲಿ ಈ ಎಲ್ಲ ಉಪಜಾತಿಗಳನ್ನು ಉಲ್ಲೇಖ ಮಾಡಿಲ್ಲ. ಇದರಿಂದ ಮೀಸಲು ಸೌಲಭ್ಯ ಪಡೆಯಲು ಸಾಕಷ್ಟು ತೊಂದರೆ ಉಂಟಾಗುತ್ತಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News