ಕೆಎಂಎಫ್‌ನಿಂದ ದಿಲ್ಲಿಗೆ 1 ಲಕ್ಷ ಲೀ. ಹಾಲು ಪೂರೈಕೆ

Update: 2019-06-11 17:08 GMT

ಬೆಂಗಳೂರು, ಜೂ.11: ರಾಜ್ಯದ ಹಸುವಿನ ಹಾಲಿಗೆ ದೇಶದ ರಾಜಧಾನಿ ದಿಲ್ಲಿಯಿಂದ ಬೇಡಿಕೆ ಬಂದಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ಹಾಲು ಮಹಾ ಮಂಡಳಿ(ಕೆಎಂಎಫ್) ಪ್ರಾಯೋಗಿಕವಾಗಿ ಒಂದು ಲಕ್ಷ ಟೀಲರ್ ಹಾಲನ್ನು ಕಳುಹಿಸಲಾಗಿದೆ.

ದಿಲ್ಲಿಯ ಮದರ್ ಡೇರಿ ಅಲ್ಲಿನ ಗ್ರಾಹಕರಿಗೆ ಸ್ಯಾಚೆಟ್‌ಗಳಲ್ಲಿ ಹಸುವಿನ ಹಾಲನ್ನು ಪೂರೈಕೆ ಮಾಡುತ್ತಿದ್ದು, ಅತಿಯಾದ ಬೇಡಿಕೆ ಬರುತ್ತಿದೆ. ಹೀಗಾಗಿ, ಅಲ್ಲಿ ಹಾಲು ಅಗತ್ಯ ಪ್ರಮಾಣದಲ್ಲಿ ಇಲ್ಲದ ಕಾರಣ ಕೆಎಂಎಫ್‌ಗೆ ಬೇಡಿಕೆ ಸಲ್ಲಿಸಿದೆ. ರೆಣಿಗುಂಟ ರೈಲು ನಿಲ್ದಾಣದಿಂದ 43 ಸಾವಿರ ಲೀಟರ್ ಸಾಂದ್ರೀಕರಿಸಿದ ಹಾಲನ್ನು ಕಳುಹಿಸಲಾಗಿದೆ ಎಂದು ಕೆಎಂಎಫ್ ಮಾರುಕಟ್ಟೆ ನಿರ್ದೇಶಕ ಮೃತ್ಯುಂಜಯ ಟಿ.ಕುಲಕರ್ಣಿ ಹೇಳಿದ್ದಾರೆ.

ದಿಲ್ಲಿಯ ಮದರ್ ಡೈರಿಗೆ 29 ವರ್ಷಗಳ ಹಿಂದೆ ಹಾಲು ಕಳುಹಿಸಲಾಗುತ್ತಿತ್ತು. ಅಲ್ಲಿಂದ ಕೋಲ್ಕತ್ತವರೆಗೂ ಸರಬರಾಜು ಆಗುತ್ತಿತ್ತು. ಅನಂತರ ಕೆಲವು ಕಾರಣಗಳಿಂದ ಸ್ಥಗಿತವಾಗಿತ್ತು. ಇದೀಗ ರಾಜ್ಯದ ಹಸುವಿನ ಹಾಲಿಗೆ ದಿಲ್ಲಿಯಿಂದ ಮಾರುಕಟ್ಟೆ ಸೃಷ್ಟಿಯಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಸಂಗ್ರಹಿಸಿದ ಹಸುವಿನ ಹಾಲನ್ನು ನಾಲ್ಕು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿರಿಸಿ ಕಳುಹಿಸಲಾಗುತ್ತದೆ. ಸಾಂದ್ರೀಕರಿಸುವ ಸಂದರ್ಭದಲ್ಲಿ ನೀರಿನ ಅಂಶವನ್ನು ತೆಗೆಯಲಾಗಿದ್ದು, ದಿಲ್ಲಿಯ ಮದರ್ ಡೈರಿಯಲ್ಲಿ ಅದಕ್ಕೆ ನೀರಿನ ಅಂಶ ಸೇರಿಸಿ ಸಾಮಾನ್ಯ ರೂಪಕ್ಕೆ ತಂದು, ಗ್ರಾಹಕರಿಗೆ ಪೂರೈಕೆ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News