ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯಕ್ಕೊಳಗಾದ ಸರಕಾರಿ ವಾಣಿಜ್ಯ ಮಳಿಗೆಗಳು

Update: 2019-06-11 17:19 GMT

ಹನೂರು, ಜೂ.11: ಹನೂರು ಪಟ್ಟಣ ಪಂಚಾಯತ್ ಗೆ ಆರ್ಥಿಕ ಶಕ್ತಿ ನೀಡಬೇಕಿದ್ದ ಹಲವು ಸರಕಾರಿ ವಾಣಿಜ್ಯ ಮಳಿಗೆಗಳು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೂಲ ಆದಾಯ ಕಳೆದುಕೊಂಡು ಲಕ್ಷಾಂತರ ರೂಪಾಯಿ ನಷ್ಟಕ್ಕೆ ಕಾರಣವಾಗಿದೆ.

ಪಟ್ಟಣದ ಹೃದಯ ಭಾಗದಲ್ಲಿರುವ ಖಾಸಗಿ ಬಸ್ ನಿಲ್ದಾಣದಲ್ಲಿ ಪಟ್ಟಣ ಪಂಚಾಯತ್ ವತಿಯಿಂದ 34 ಮಳಿಗೆಗಳುಳ್ಳ ವಾಣಿಜ್ಯ ಸಂಕಿರ್ಣವನ್ನು ನಿರ್ಮಿಸಿ ಟೆಂಡರ್ ಮುಖಾಂತರ ಬಾಡಿಗೆಗೆ ನೀಡಲಾಗಿತ್ತು. ದಿನ ಕಳೆಯುತ್ತಿದಂತೆ ಪಂಚಾಯತ್ ಜೊತೆ ಒಪ್ಪಂದ ಮಾಡಿಕೊಂಡ ಅರ್ಧಕ್ಕಿಂತ ಹೆಚ್ಚು ಅಂಗಡಿ ಬಾಡಿಗೆದಾರರು ತಾವು ನೀಡಬೇಕಿದ್ದ ದುಪ್ಪಟ್ಟು ಬಾಡಿಗೆ ಹಣವನ್ನು ಪಾವತಿ ಮಾಡಲು ಸಾಧ್ಯವಾಗದೆ ತಮ್ಮ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿದರು. ನಂತರ ಅಧಿಕಾರಿಗಳು ಅಂಗಡಿಗಳಿಗೆ ಬೀಗ ಜಡಿದು ಪಂಚಾಯತ್ ವಶಕ್ಕೆ ಪಡೆದು ವರ್ಷಗಳೇ ಕಳೆದಿದ್ದರೂ ಸಹ ಮರು ಹರಾಜು ಬಗ್ಗೆ ಮಾತನಾಡದೇ ಮೌನ ವಹಿಸಿರುವುದರಿಂದ ಪಪಂ ಆಡಳಿತ ಮಂಡಳಿ ತನ್ನ ಮೂಲ ಉದ್ದೇಶವನ್ನು ಗಾಳಿಗೆ ತೂರಿ ಕಾಲಹರಣ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತವಾಗಿದೆ                

ಎಷ್ಟು ಬಾಕಿ: ಕೆಲವರು 2 ಲಕ್ಷ ರೂ. ಗಿಂತ  ಹೆಚ್ಚಿನ ಬಾಡಿಗೆ ಉಳಿಸಿಕೊಂಡಿದ್ದರೆ ಇನ್ನೂ ಕೆಲವರು 50 ರಿಂದ 1 ಲಕ್ಷದವರೆಗೆ ಬಾಕಿ ಉಳಿಸಿಕೊಂಡಿದ್ದಾರೆ.  ಈವರೆಗೆ ಪಟ್ಟಣ ಪಂಚಾಯತ್ ಗೆ ಅಂದಾಜು 8 ಲಕ್ಷಾಂತರ ರೂ. ಗೂ ಹೆಚ್ಚು ಹಣ ಬಾಕಿ ಇದ್ದು, ಇನ್ನು ಉಳಿದ ಮಳಿಗೆಯವರು ಕೂಡಾ ಸರಿಯಾಗಿ ಬಾಡಿಗೆ ಕಟ್ಟುತ್ತಿಲ್ಲ ಎಂದು ಹಲವರು ದೂರಿದ್ದಾರೆ.

ಸ್ಥಳೀಯ ಆಡಳಿತದ ನಿರ್ವಹಣೆಗೆ ಸರಕಾರದ ಅನುದಾನಕ್ಕೆ ಕಾಯದೇ ಸ್ವಂತ ಆದಾಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಿ ಮಾಡದೇ ಇರುವುದು ಮತ್ತು ವರ್ಷದಿಂದ ಬೀಗ ಜಡಿದಿರುವ ಅಂಗಡಿಗಳನ್ನು ಮರು ಹರಾಜು ಮಾಡದೆ ಇರುವುದನ್ನು ನೋಡಿದರೆ ಪಪಂ ಆಡಳಿತ ಮಂಡಳಿ ತನ್ನ ಮೂಲ ಉದ್ದೇಶವನ್ನು ಗಾಳಿಗೆ ತೂರಿದಂತಿದೆ.

-ಬಾಲರಾಜ್, ಹನೂರು ನಿವಾಸಿ 

ಹನೂರು ಪಟ್ಟಣ ಪಂಚಾಯತಿಯ ವಾಣಿಜ್ಯ ಮಳಿಗೆಗಳ ಮರು ಹರಾಜು ಮತ್ತು ಬಾಕಿ ಉಳಿದ ಬಾಡಿಗೆ ಹಣ ವಸುಲಾತಿಯ ಬಗ್ಗೆ ಪಟ್ಟಣ ಪಂಚಾಯತ್ ಅಧಿಕಾರಿಗಳ ಬಳಿ ಮಾಹಿತಿ ಪಡೆದು ತುರ್ತಾಗಿ ಕ್ರಮಕೈಗೊಳ್ಳುವಂತೆ ಸೂಚಿಸಲಾಗುವುದು

-ಬಿ.ಬಿ ಕಾವೇರಿ, ಚಾಮರಾಜನಗರ ಜಿಲ್ಲಾಧಿಕಾರಿ

Writer - ವರದಿ: ಅಭಿಲಾಷ್.ಟಿ

contributor

Editor - ವರದಿ: ಅಭಿಲಾಷ್.ಟಿ

contributor

Similar News