ಪ್ರಕೃತಿ ಕಾಪಾಡದಿದ್ದರೆ ಮನುಕುಲ ನಾಶ: ಸಂಸದೆ ಸುಮಲತಾ

Update: 2019-06-11 18:19 GMT

ಮಂಡ್ಯ, ಜೂ.11: ಪ್ರಕೃತಿಯನ್ನು ಕಾಪಾಡದಿದ್ದರೆ ಮನುಕುಲ ನಾಶವಾಗುತ್ತದೆ ಎಂದು ಎಚ್ಚರಿಸಿರುವ ಸಂಸದೆ ಸುಮಲತಾ ಅಂಬರೀಷ್,  ಪರಿಸರವನ್ನು ಕಾಪಾಡಿದರೆ ಪರಿಸರ ನಮ್ಮನ್ನು ಕಾಪಾಡುತ್ತದೆ ಎಂದು ಕರೆ ನೀಡಿದ್ದಾರೆ.

ತಾಲೂಕಿನ ಕೀಲಾರ ಗ್ರಾಮದಲ್ಲಿ ಮಂಗಳವಾರ ಸ್ವಚ್ಛ ಮೇವ ಜಯತೇ ಜನಾಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಊರಿಗೆ ರಸ್ತೆ, ಕಟ್ಟಡ, ಸೇತುವೆ ನಿರ್ಮಾಣದ ಬಗ್ಗೆ ಹೆಚ್ಚು ಗಮನ ಹರಿಸುತ್ತೇವೆ ವಿನಾ ಶುದ್ಧ ಗಾಳಿ, ಕುಡಿಯುವ ನೀರು ಹಾಗೂ ಉತ್ತಮ ವಾತಾವರಣದ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ ಎಂದು ವಿಷಾದಿಸಿದರು.

ಹುಟ್ಟಿದಾಗಿನಿಂದ ಸಾಯುವವರೆಗೂ ಜೀವಂತವಾಗಿ ನೋಡಿಕೊಳ್ಳೋದು ಪ್ರಕೃತಿ. ಅಭಿವೃದ್ದಿಗಾಗಿ ಮರಗಿಡ ಕಡಿದರೆ ಅದರಿಂದಾಗುವ ಅನಾನುಕೂಲ ಏನೆಂಬುದನ್ನು ತಿಳಿಯಬೇಕು. ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸಲು ಶಿಕ್ಷಕರು ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.

ಕೆಲಸದಾಕೆ ಬರಲಿಲ್ಲವೆಂದು ನಮ್ಮ ಮನೆ ಕ್ಲೀನ್ ಮಾಡಿಕೊಳ್ಳುವಂತೆ, ಯಾರು ಮಾಡಲಿ ಬಿಡಲಿ ನಮ್ಮ ಪರಿಸರವನ್ನು ನಾವು ಉಳಿಸಬೇಕಿದೆ. ಯುವ ಶಕ್ತಿ ಮುಂದೆ ಯಾವ ಸರಕಾರಗಳು ಏನು ಮಾಡಲು ಸಾಧ್ಯವಿಲ್ಲ. ಹೀಗಾಗಿ ಪರಿಸರದ ಬಗ್ಗೆ ಯುವಶಕ್ತಿ ಕಾಳಜಿ ವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಉತ್ತರ ಕರ್ನಾಟಕದಲ್ಲಿ ಒಂದು ಕೊಡ ನೀರಿಗಾಗಿ ಕಿಲೋ ಮೀಟರ್ ದೂರ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಇಂತಹ ಸಂದರ್ಭದಲ್ಲಿ ನೀರನ್ನು ಮಿತವಾಗಿ ಬಳಸುವ ಬಗ್ಗೆ ಪ್ರತಿಯೊಬ್ಬರಿಗೂ ಜವಾಬ್ಧಾರಿ ಇರಬೇಕು ಎಂದು ಅವರು ತಿಳಿಸಿದರು.

ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಅನೇಕ ರೋಗಗಳಿಂದ ದೂರವಿರಬಹುದಾಗಿದೆ. ಪ್ರತಿಯೊಬ್ಬರು ಸ್ವಪ್ರೇರಿತರಾಗಿ ಪ್ರಕೃತಿಯ ಬೆಳೆಸಲು ಹಾಗೂ ಸ್ವಚ್ಛತೆ ಕಾಪಾಡಲು ಮುಂದಾಗಬೇಕು ಎಂದರು.

ಜಿಪಂ ಸದಸ್ಯೆ ರಾಣಿ ಸಿದ್ಧರಾಜು, ತಾಪಂ ಸದಸ್ಯ ಕೆ.ಎನ್.ಶಿವರುದ್ರ, ಕೀಲಾರ ಗ್ರಾಪಂ ಅಧ್ಯಕ್ಷ ಕೆ.ಎನ್.ರಾಜಶೇಖರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಡಿ ಪ್ರಕಾಶ್ ಉಪಸ್ಥಿತರಿದ್ದರು.

ದಳಪತಿಗಳು ಗೈರು: ಶಾಸಕ ಎಂ.ಶ್ರೀನಿವಾಸ್ ಹೊರತುಪಡಿಸಿ ಕಾರ್ಯಕ್ರಮ ಉದ್ಘಾಟಿಸಬೇಕಿದ್ದ ಸಚಿವ ಸಿ.ಎಸ್.ಪುಟ್ಟರಾಜು ಸೇರಿ ಎಲ್ಲಾ ಜೆಡಿಎಸ್ ಶಾಸಕರು ಮತ್ತು ಜಿಪಂ ಅಧ್ಯಕ್ಷೆ ನಾಗರತ್ನ ಸ್ವಾಮಿ, ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಕಾರ್ಯಕ್ರಮಕ್ಕೆ ಗೈರಾಗಿದ್ದು ಚರ್ಚೆಗೆ ಗ್ರಾಸವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News