ಜನರ ಸಮಸ್ಯೆ ಆಲಿಕೆಗೆ ವಾರದಲ್ಲಿ ಮೂರು ದಿನ ಮೀಸಲು: ಸಂಸದೆ ಸುಮಲತಾ

Update: 2019-06-11 18:21 GMT

ಮಂಡ್ಯ, ಜೂ.11: ವಾರದಲ್ಲಿ ಮೂರು ದಿನ ಜನರ ಸಮಸ್ಯೆ ಆಲಿಸಲು ಮೀಸಲಿಡುವುದಾಗಿ ಸಂಸದೆ ಸುಮಲತಾ ಅಂಬರೀಷ್ ಭರವಸೆ ನೀಡಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮಂಡ್ಯದಲ್ಲಿ ಮನೆ ಮಾಡಿ ಆಗಿದೆ. ಅಲ್ಲಿ ಸದ್ಯದಲ್ಲೇ ವಾಸ್ತವ್ಯ ಮಾಡುತ್ತೇನೆ ಎಂದರು. ಎಲ್ಲಾ ಕ್ಷೇತ್ರದಲ್ಲಿ ಸಂಚಾರ ಮಾಡಿ ಸಮಸ್ಯೆ ಆಲಿಸುತ್ತೇನೆ. ಆದರೆ, ಈಗ ಅಧಿವೇಶನ ಆರಂಭವಾಗಲಿದೆ. ಅದಕ್ಕಾಗಿ ಸ್ವಲ್ಪ ಕಷ್ಟ ಆಗುತ್ತಿದೆ ಎಂದು ಹೇಳಿದರು.

ನನಗೆ ಕಚೇರಿ ಮತ್ತು ಸಿಬ್ಬಂದಿ ಯಾವುದು ಇನ್ನೂ ಸಿಕ್ಕಿಲ್ಲ. ಸಿಕ್ಕ ಬಳಿಕ ನಾನು ಕಚೇರಿ ತೆರದು ಜನರ ಸಮಸ್ಯೆ ಆಲಿಸುತ್ತೇನೆ. ದಿಲ್ಲಿಯಲ್ಲಿದ್ದಾಗ ಎಲ್ಲರಿಗೂ ಎಲ್ಲಾ ಸಂದರ್ಭದಲ್ಲಿ ಸಿಗಲು ಆಗಲ್ಲ ಎಂದು ಸ್ಪಷ್ಟಪಡಿಸಿದರು.

ಪರಿಸರ ಸ್ವಚ್ಛತೆಯ ಕುರಿತ ಮೊದಲ ಕಾರ್ಯಕ್ರಮ ನನಗೆ ಖುಷಿ ಕೊಟ್ಟಿದೆ. ಈ ತರಹದ ಹಲವು ಕಾರ್ಯಕ್ರಮಗಳು ಆಗಬೇಕಿದೆ. ಗ್ರಾಮ ವಾಸ್ತವ್ಯ ಸಿಎಂ ಅವರ ಯೋಜನೆ. ಹಾಗಾಗಿ ಅದನ್ನು ಮುಂದುವರಿಸುತ್ತಿದ್ದಾರೆ. ಜಿಲ್ಲೆಯ ಅಭಿವೃದ್ದಿಗಾಗಿ ಪಕ್ಷಬೇಧ ಮರೆತು ಹೊಂದಾಣಿಕೆಗೆ ಸಿದ್ದವಿದ್ದೇನೆ ಎಂದು ಅವರು ಹೇಳಿದರು.

ಅದೊಂದು ಪ್ರಜಾಪ್ರಭುತ್ವದ ದೇವಾಲಯ. ಅಲ್ಲಿಗೆ ಹೋದಾಗ ಆದ ಸಂತಸದ ಕ್ಷಣ ಹೇಳಲು ಆಗುತ್ತಿಲ್ಲ ಎಂದು ಮೊದಲ ಬಾರಿಗೆ ಸಂಸತ್ ಪ್ರವೇಶ ಮಾಡಿದ ಕ್ಷಣದ ಬಗ್ಗೆ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News