ಬಿಕ್ಕಟ್ಟಿನ ಸುಳಿಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆ

Update: 2019-06-12 05:00 GMT

ಎಪ್ಪತ್ತರ ದಶಕದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ಖಾಸಗಿ ವಲಯದ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದಾಗ ಪ್ರತಿಗಾಮಿ ಶಕ್ತಿಗಳು ಅಪಸ್ವರ ತೆಗೆದವು. ಆದರೆ ಈ ರಾಷ್ಟ್ರೀಕರಣದ ಪರಿಣಾಮವಾಗಿ ಬ್ಯಾಂಕಿಂಗ್ ವಲಯದಲ್ಲಿ ಹೊಸ ಚೇತರಿಕೆ ಕಂಡು ಬಂತು. ಅಲ್ಲಿಯ ವರೆಗೆ ಕೇವಲ ಕೆಲವೇ ಬಂಡವಾಳಶಾಹಿಗಳ, ಸಿರಿವಂತರ, ಉದ್ಯಮಪತಿಗಳ ಸೊತ್ತಾಗಿದ್ದ ಬ್ಯಾಂಕುಗಳು ಬಡವರ ಮನೆ ಬಾಗಿಲಿಗೆ ಬಂದವು. ಗ್ರಾಮಾಂತರ ಪ್ರದೇಶಗಳಲ್ಲಿ ಬ್ಯಾಂಕುಗಳ ಶಾಖೆಗಳು ಆರಂಭವಾದವು.ಹಳ್ಳಿಗಾಡಿನ ರೈತಾಪಿ ಜನರಿಗೆ ಸಾಲ ಸೌಲಭ್ಯಗಳು ದೊರೆಯತೊಡಗಿದವು. ನಗರ ಪ್ರದೇಶದ ಸಣ್ಣ ಪುಟ್ಟ ವ್ಯಾಪಾರಿಗಳು, ತರಕಾರಿ, ಸೊಪ್ಪುಮತ್ತು ಚಪ್ಪಲಿ ಮಾರಾಟ ಮಾಡುವ ಕಡು ಬಡವರು ಸಾಲ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಚೇತರಿಸಿದರು.ಜನಾರ್ದನ ಪೂಜಾರಿಯವರು ಕೇಂದ್ರ ಹಣಕಾಸು ಸಚಿವರಾಗಿದ್ದಾಗ ನಡೆಸಿದ ಸಾಲ ಮೇಳಗಳು ಜನಪ್ರಿಯತೆ ಗಳಿಸಿದವು, ಆಗ ಸಾಲ ಪಡೆದವರು ತಪ್ಪದೆ ಸಾಲ ಮರುಪಾವತಿ ಮಾಡಿದರು. ಹಳ್ಳಿಗಳಿಗೆ ಬ್ಯಾಂಕುಗಳು ಹೊಸ ಚೈತನ್ಯ ನೀಡಿದವು. ಬ್ಯಾಂಕಿಂಗ್ ವಲಯ ವಿಸ್ತಾರವಾಯಿತು. ಆದರೆ ಈಗ ಅದೇ ಬ್ಯಾಂಕಿಂಗ್ ವಲಯ ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ.

ಸುಸ್ತಿ ಸಾಲದ ಪ್ರಮಾಣದ ಹೆಚ್ಚಳದಿಂದ ಬ್ಯಾಂಕುಗಳು ತತ್ತರಿಸಿ ಹೋಗಿವೆ. ಅದರ ಜೊತೆಗೆ ವಂಚನೆ, ದುರಾಡಳಿತ, ಸ್ವಜನಪಕ್ಷಪಾತ, ಕೆಟ್ಟ ಆರ್ಥಿಕ ನೀತಿಗಳಿಂದ ಬ್ಯಾಂಕುಗಳು ತೊಂದರೆಗೆ ಸಿಲುಕಿಕೊಂಡಿವೆ. ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚನೆ ಮಾಡಿದ ವಿಜಯ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿಯಂಥವರು ವಿದೇಶಕ್ಕೆ ಪಲಾಯನ ಮಾಡಿದ್ದಾರೆ. ಇವು ಬೆಳಕಿಗೆ ಬಂದಿರುವ ಸಂಗತಿಗಳು, ಬೆಳಕಿಗೆ ಬಾರದೆ ಉಳಿದ ಅದೆಷ್ಟೋ ವಂಚನೆಯ ಪ್ರಕರಣಗಳು ಮುಚ್ಚಿ ಹೋಗಿವೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ಎಂದು ಜನರು ದಿಗಿಲುಗೊಂಡು ನೋಡುತ್ತಿದ್ದಾರೆ.

 2018ರಲ್ಲಿ ಬೆಳಕಿಗೆ ಬಂದ ಅಂಕಿ ಅಂಶಗಳ ಪ್ರಕಾರ ದೇಶದ ಬ್ಯಾಂಕುಗಳಿಗೆ ಒಟ್ಟು ವಂಚನೆ ಮಾಡಲಾದ ಮೊತ್ತ 71,500 ಕೋಟಿ ರೂಪಾಯಿ. 2010ರಲ್ಲಿ 3,800 ಕೋಟಿ ರೂಪಾಯಿ ಇದ್ದ ವಂಚನೆಯ ಪ್ರಮಾಣ ಏರುತ್ತಾ ಹೋಗಿ ಈಗ ಎಪ್ಪತ್ತು ಸಾವಿರ ಕೋಟಿ ರೂಪಾಯಿ ದಾಟಿದೆ. 2017ಕ್ಕಿಂತ ಈ ವಂಚನೆಯ ಪ್ರಮಾಣ ಶೇ. 73ರಷ್ಟು ಹೆಚ್ಚಳವಾಗಿದೆ. ಇದು ಯಾರೋ ನೀಡಿದ ಅಂಕಿ ಅಂಶಗಳಲ್ಲ. ಭಾರತೀಯ ರಿಸರ್ವ ಬ್ಯಾಂಕ್ ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿಅಂಶಗಳು. ಕಳೆದ ಹನ್ನೊಂದು ವರ್ಷಗಳಲ್ಲಿ ಹೀಗೆ ಬ್ಯಾಂಕುಗಳಿಗೆ ವಂಚನೆ ಮಾಡಲಾದ ಮೊತ್ತ ಒಟ್ಟು ಎರಡು ಲಕ್ಷ ಕೋಟಿ ರೂಪಾಯಿಗಳು. ಇದು ಸಣ್ಣ ಮೊತ್ತವಲ್ಲ. ಈ ವಂಚನೆಯಿಂದ ನಷ್ಟಕ್ಕೊಳಗಾದ ಬ್ಯಾಂಕುಗಳು ಈ ನಷ್ಟ ಸರಿದೂಗಿಸಲು ಜನಸಾಮಾನ್ಯರಿಗೆ ಪ್ರತಿಯೊಂದು ಸೇವೆಗೆ ದುಬಾರಿ ಶುಲ್ಕಗಳನ್ನು ವಿಧಿಸತೊಡಗಿವೆ. ಸಿರಿವಂತರ ವಂಚನೆಗೆ ಬಡವರು ಬೆಲೆ ತೆರ ಬೇಕಾಗಿದೆ.

ಬ್ಯಾಂಕುಗಳಿಂದ ಹಣ ಕದಿಯುವ ವಂಚಕರು ಒಂದು ವಿಧದಲ್ಲಿ ಬ್ಯಾಂಕುಗಳಿಗೆ ಮೋಸ ಮಾಡಿದರೆ, ಬ್ಯಾಂಕುಗಳಿಂದ ಸಾಲ ಪಡೆದು ಸಕಾಲದಲ್ಲಿ ಮರುಪಾವತಿ ಮಾಡದೆ ತಪ್ಪಿಸಿಕೊಳ್ಳುವುದು ಸಿರಿವಂತರ ಚಾಳಿ. ಈ ರೀತಿ ಬ್ಯಾಂಕುಗಳಿಂದ ಸಾಲ ಪಡೆದು ಬಾಕಿ ಪಾವತಿ ಮಾಡದೇ ತಪ್ಪಿಸಿಕೊಳ್ಳುವವರಲ್ಲಿ ಭಾರೀ ಬಂಡವಾಳಗಾರರು ಹಾಗೂ ಉದ್ಯಮಪತಿಗಳ ಪಾಲು ದೊಡ್ಡದಿದೆ. ಜನಸಾಮಾನ್ಯರಿಂದ ಬಡಕೂಲಿಕಾರರಿಂದ ಬ್ಯಾಂಕುಗಳಿಗೆ ಯಾವುದೇ ವಂಚನೆಯಾಗಿಲ್ಲ. ವಂಚನೆ ಮಾಡಲು ಸಾಧ್ಯವಿಲ್ಲ. ಬ್ಯಾಂಕ್ ನಿಯಮಗಳು ಅಷ್ಟು ಕಠಿಣವಾಗಿವೆ. ಬ್ಯಾಂಕುಗಳಲ್ಲಿ ಸಾಲ ಮಾಡಿ ಮರುಪಾವತಿ ಮಾಡದೆ ತಪ್ಪಿಸಿಕೊಳ್ಳುವ ದಾರಿ ಬಡವರಿಗೆ ಗೊತ್ತಿರುವುದಿಲ್ಲ. ಆದರೆ ಬಂಡವಾಳಶಾಹಿಗಳಿಗೆ ಹಾಗೂ ಉದ್ಯಮಪತಿಗಳಿಗೆ ಗೊತ್ತಿರುತ್ತದೆ. ಭಾರೀ ಪ್ರಮಾಣದ ಲಂಚ ಹಾಗೂ ಕಮಿಷನ್ ಆಸೆಗೆ ಬ್ಯಾಂಕಿಂಗ್ ಸಿಬ್ಬಂದಿ ಅದರಲ್ಲೂ ಉನ್ನತ ಅಧಿಕಾರಿಗಳು ಈ ವಂಚನೆಯಲ್ಲಿ ಶಾಮೀಲಾಗುತ್ತಾರೆ. ಯಾವುದರಲ್ಲೂ ಸಿಕ್ಕಿ ಬೀಳದಂತೆ ವಂಚಿಸುವ ಮಾರ್ಗಗಳನ್ನು ಬ್ಯಾಂಕುಗಳ ಒಳಗಿರುವವರೇ ವಂಚಕರಿಗೆ ಹೇಳಿ ಕೊಡುತ್ತಾರೆ. ಹೀಗಾಗಿ ಇಂಥ ವಂಚನೆಯ ಪ್ರಕರಣಗಳಲ್ಲಿ ತನಿಖೆಗೆ ಕ್ರಮ ಕೈಗೊಂಡರೂ ಪ್ರಯೋಜನವಾಗುವುದಿಲ್ಲ. ಅಂತಲೆ ಬ್ಯಾಂಕುಗಳಿಗೆ ಮೋಸ ಮಾಡಿದವರನ್ನು ಹಿಡಿದು ಶಿಕ್ಷೆಗೊಳಪಡಿಸಿ ಹಣ ವಸೂಲಿ ಮಾಡಿದ ಉದಾಹರಣೆಗಳು ಅತ್ಯಂತ ವಿರಳ.

ಇನ್ನು ಕೆಲ ಪ್ರಕರಣಗಳಲ್ಲಿ ಬ್ಯಾಂಕುಗಳಿಂದ ಭಾರೀ ಪ್ರಮಾಣದ ಸಾಲ ಪಡೆದ ಉದ್ಯಮಪತಿಗಳ ಬಗ್ಗೆ, ಕಾರ್ಪೊರೇಟ್ ಕಂಪೆನಿಗಳ ಬಗ್ಗೆ ಸರಕಾರವೇ ಅನೇಕ ಬಾರಿ ಅನುಕಂಪ ತೋರಿಸಿ ಅಂಥವರ ಬಾಕಿ ಸಾಲವನ್ನು ಮನ್ನಾ ಮಾಡಿಸುತ್ತದೆ. ಕೇಂದ್ರದ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ 2014-2017ರ ಅವಧಿಯಲ್ಲಿ ಇಂಥ ಮೂರು ಲಕ್ಷ ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡಿದೆ. ಹೀಗಾಗಿ ಲಾಭದಾಯಕವಾಗಿದ್ದ ಬ್ಯಾಂಕಿಂಗ್ ಕ್ಷೇತ್ರ ನಷ್ಟಕ್ಕೆ ಒಳಗಾಗಿ ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ.

ಬ್ಯಾಂಕುಗಳು ನಡೆಯುವುದು ಜನಸಾಮಾನ್ಯರ ಠೇವಣಿಯ ಹಣದಿಂದ. ಇಂಥ ಸನ್ನಿವೇಶದಲ್ಲಿ ಬ್ಯಾಂಕುಗಳಿಗೆ ವಂಚನೆಯಾದರೆ ಅದರ ಹೊರೆ ಜನಸಾಮಾನ್ಯರ ಮೇಲೆ ಬೀಳುತ್ತದೆ. ನಷ್ಟದ ಹೊರೆ ತಗ್ಗಿಸಲು ಬ್ಯಾಂಕುಗಳ ಸಾಲದ ಬಡ್ಡಿಯನ್ನು ಹೆಚ್ಚಿಸಲಾಗುತ್ತದೆ.ಜನಸಾಮಾನ್ಯರ ಠೇವಣಿಯ ಮೇಲಿನ ಬಡ್ಡಿಗಳು ಇಳಿಕೆಯಾಗುತ್ತವೆ. ನಾನಾ ಸೇವೆಗಳಿಗಾಗಿ ವಿಧಿಸುವ ಶುಲ್ಕಗಳು ಏರಿಕೆಯಾಗುತ್ತವೆ. ಹೊಸ, ಹೊಸ ಶುಲ್ಕಗಳನ್ನು ವಿಧಿಸಲಾಗುತ್ತದೆ. ಇದರಿಂದ ವಿಶೇಷ ಸೌಲಭ್ಯಗಳ ಖಾತೆಗಳನ್ನು ಹೊಂದಿರುವ ಸಿರಿವಂತರಿಗೆ, ಉದ್ಯಮಪತಿಗಳಿಗೆ ಹೊರೆಯಾಗುವುದಿಲ್ಲ. ಬದಲಾಗಿ ಕಷ್ಟಪಟ್ಟು ದುಡಿದು ಬ್ಯಾಂಕುಗಳಲ್ಲಿಟ್ಟರೆ ಸುರಕ್ಷಿತವಾಗಿ ಇರುತ್ತದೆ ಎಂದು ಠೇವಣಿ ಇಡುವ ಮಧ್ಯಮ ವರ್ಗದ, ದುಡಿಯುವ ವರ್ಗದ ಜನಸಾಮಾನ್ಯರಿಗೆ ಹೊರೆಯಾಗುತ್ತದೆ. ದುಬಾರಿ ಸೇವಾ ಶುಲ್ಕವನ್ನು ಭರಿಸಲಾಗದೆ ಅವರು ತತ್ತರಿಸಿ ಹೋಗುತ್ತಾರೆ.

 ದೇಶದ ಬ್ಯಾಂಕಿಂಗ್ ವ್ಯವಸ್ಥೆಗೆ ಆಧಾರ ಸ್ತಂಭವಾಗಿ ನಿಂತಿರುವವರು ಸಣ್ಣ ಉಳಿತಾಯದಾರರು. ಈಗ ಅವರು ಯಾರೋ ಮಾಡಿದ ತಪ್ಪಿಗೆ ಸಂಕಷ್ಟಗಳಿಗೆ ಸಿಲುಕಿದ್ದಾರೆ. ಬ್ಯಾಂಕುಗಳಿಗೆ ಟೋಪಿ ಹಾಕಿದ ಭಾರೀ ಉದ್ಯಮ ಪತಿಗಳು, ಸಿರಿವಂತರು ಸಾವಿರಾರು ಕೋಟಿ ರೂಪಾಯಿ ದೋಚಿ ಮಜಾ ಉಡಾಯಿಸುತ್ತಿದ್ದಾರೆ. ಇದರಿಂದಾಗಿ ಬ್ಯಾಂಕಿಂಗ್ ವ್ಯವಸ್ಥೆ ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ. ಬ್ಯಾಂಕುಗಳು ಸುರಕ್ಷಿತವಾಗಿ ಉಳಿಯಬೇಕೆಂದರೆ ಈ ಬ್ಯಾಂಕಿಂಗ್ ವಂಚನೆ, ಮೋಸಗಳನ್ನು ತಡೆಯಬೇಕು. ಈ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಹಾಗೂ ಕೇಂದ್ರ ಸರಕಾರಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು

ಈ ನಿಟ್ಟಿನಲ್ಲಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಒತ್ತಾಯಿಸಿರುವಂತೆ ಬ್ಯಾಂಕುಗಳಿಗೆ ಸಾಲ ಮರು ಪಾವತಿ ಮಾಡದ, ವಂಚನೆ ಮಾಡಿದವರ, ಸಾಲ ಮನ್ನಾ ಮಾಡಲ್ಪಟ್ಟವರ ಹೆಸರಿನ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ತಕ್ಷಣ ಬಹಿರಂಗ ಪಡಿಸಬೇಕು. ಬ್ಯಾಂಕಿಂಗ್ ವ್ಯವಸ್ಥೆಯನ್ನು ಈ ಬಿಕ್ಕಟ್ಟಿನ ಸುಳಿಯಿಂದ ಪಾರು ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News