ಗೋಡ್ಸೆ, ಪ್ರಜ್ಞಾರಂತಹ ವ್ಯಕ್ತಿತ್ವಗಳನ್ನು ಮದ್ರಸಾಗಳು ಬೆಳೆಸುವುದಿಲ್ಲ: ಅಝಂ ಖಾನ್

Update: 2019-06-12 17:31 GMT

ರಾಮಪುರ್, ಜೂ.12: “ಮದ್ರಸಾಗಳು ನಾಥೂರಾಂ ಗೋಡ್ಸೆ ಅಥವಾ ಪ್ರಜ್ಞಾ ಸಿಂಗ್ ಠಾಕುರ್ ಅವರಂತಹವರನ್ನು ಬೆಳೆಸುವುದಿಲ್ಲ'' ಎಂದು ಸಮಾಜವಾದಿ ಪಕ್ಷದ ನಾಯಕ ಅಝಂ ಖಾನ್ ಹೇಳಿದ್ದಾರೆ.

ಮದ್ರಸಾಗಳಲ್ಲಿ ಮುಖ್ಯವಾಹಿನಿ ಶಿಕ್ಷಣ ಒದಗಿಸುವ ಪ್ರಧಾನಿ ನರೇಂದ್ರ ಮೋದಿಯ ಹೊಸ ಯೋಜನೆಯ ಪ್ರಸ್ತಾಪದ ಕುರಿತಂತೆ  ಪ್ರತಿಕ್ರಿಯೆ ಕೇಳಿದಾಗ ಖಾನ್ ಮೇಲಿನಂತೆ ಹೇಳಿದ್ದಾರೆ.

“ನಾಥೂರಾಂ ಗೋಡ್ಸೆಯಂತಹ ವ್ಯಕ್ತಿಯನ್ನು ಅಥವಾ ಪ್ರಜ್ಞಾ ಠಾಕುರ್ ಅವರಂತಹ ವ್ಯಕ್ತಿತ್ವವನ್ನು ಮದರಸಾಗಳು ಬೆಳೆಸುವುದಿಲ್ಲ. ನಾಥೂರಾಂ ಗೋಡ್ಸೆಯನ್ನು ಬೆಂಬಲಿಸುವವರನ್ನು ಪ್ರಜಾಪ್ರಭುತ್ವದ ವೈರಿಗಳೆಂದು ಹಾಗೂ ಉಗ್ರವಾದ ಆರೋಪ ಹೊತ್ತವರಿಗೆ ಬಹುಮಾನ ನೀಡಲಾಗುವುದಿಲ್ಲವೆಂದು ಮೊದಲು ಘೋಷಿಸಿ'' ಎಂದು ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ ಅವರು ಹೇಳಿದ್ದಾರೆ.

“ಮದ್ರಸಾಗಳಿಗೆ ಕೇಂದ್ರ ಸರಕಾರ ಸಹಾಯ ಮಾಡಬೇಕೆಂದಿದ್ದರೆ ಮದ್ರಸಾಗಳ ಸ್ಥಿತಿಯನ್ನು ಸುಧಾರಿಸಬೇಕು. ಅಲ್ಲಿ ಧಾರ್ಮಿಕ ಶಿಕ್ಷಣ ನೀಡಲಾಗುತ್ತದೆ ಜತೆಗೆ ಇಂಗ್ಲಿಷ್, ಹಿಂದಿ ಮತ್ತು ಗಣಿತ ಕೂಡ ಕಲಿಸಲಾಗುತ್ತದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನಿಮಗೆ ಸಹಾಯ ಮಾಡಬೇಕೆಂದಿದ್ದರೆ ಮದ್ರಸಾಗಳ ಗುಣಮಟ್ಟ ಸುಧಾರಿಸಿ, ಅವುಗಳಿಗೆ ಕಟ್ಟಡ, ಪೀಠೋಪಕರಣ ಹಾಗೂ ಮಕ್ಕಳಿಗೆ ಮಧ್ಯಾಹ್ನದ ಊಟ ಒದಗಿಸಿ'' ಎಂದು ಉತ್ತರ ಪ್ರದೇಶದ ರಾಮಪುರ್ ಲೋಕಸಭಾ ಕ್ಷೇತ್ರದ ಸಂಸದರಾಗಿರುವ  ಖಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News