ತುಮಕೂರು: ಮಾಧ್ಯಮದವರ ಮೇಲಿನ ಹಲ್ಲೆಗೆ ವ್ಯಾಪಕ ಖಂಡನೆ; ವಿವಿಧೆಡೆ ಪ್ರತಿಭಟನೆ

Update: 2019-06-12 17:55 GMT

ತುಮಕೂರು, ಜೂ.12: ನಗರದ ಹೊರವಲಯದ ಸತ್ಯಮಂಗಲದ ಬೇಳೂರು ಬಾಯ್ಲರ್ ಸ್ಫೋಟದ ಬಗ್ಗೆ ಸುದ್ದಿ ಮಾಡಲು ತೆರಳಿದ್ದ ಖಾಸಗಿ ವಾಹಿನಿಯ ಇಬ್ಬರು ವರದಿಗಾರರು ಹಾಗೂ ಇಬ್ಬರು ಕ್ಯಾಮರಾಮನ್‍ಗಳ ಮೇಲೆ ಬಾಯ್ಲರ್ ನ ಸಿಬ್ಬಂದಿಗಳು ಹಲ್ಲೆ ಮಾಡಿದ ಘಟನೆಯನ್ನು ಖಂಡಿಸಿ ಬುಧವಾರ ಜಿಲ್ಲೆಯಾದ್ಯಂತ ವ್ಯಾಪಕ ಪ್ರತಿಭಟನೆ ನಡೆಸಲಾಯಿತು.

ಕಳೆದ ನಾಲ್ಕು ದಿನಗಳ ಹಿಂದೆ ವಿಷಾನಿಲ ಸೋರಿಕೆಯಿಂದ ಬಾಯ್ಲರ್ ಸ್ಫೋಟ ಆಗಿತ್ತು. ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ಕಲೆಹಾಕಲು ಮಂಗಳವಾರ ವರದಿಗಾರರು ಹಾಗೂ ಕ್ಯಾಮೆರಾಮನ್‍ಗಳು ಬೇಳೂರು ಬಾಯ್ಲರ್ ಬಳಿ ತೆರಳಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿ ಲಕ್ಷಾಂತರ ರೂ.ಮೌಲ್ಯದ ಕ್ಯಾಮೆರಾ, ಮೊಬೈಲ್ ಹಾಗೂ ಟ್ರೈ ಪ್ಯಾಡ್ ಹಾಳು ಮಾಡಿದ್ದರು ಎನ್ನಲಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಘಟನೆಯನ್ನು ಖಂಡಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಘಟಕದಿಂದ ಬುಧವಾರ ಟೌನ್‍ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಉಳಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿಯೂ ಸಹ ಕೆಯುಡಬ್ಲಜೆ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಿ, ಹಲ್ಲೆ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರಕಾರಕ್ಕೆ ಒತ್ತಾಯಿಸಲಾಯಿತು.

ಮಾನವ ಸರಪಳಿ ರಚಿಸಿ ಪ್ರತಿಭಟನೆ: ಮಾಧ್ಯಮದವರ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಲು ಜಿಲ್ಲೆಯ ವಿವಿಧ ತಾಲೂಕುಗಳಿಂದ ಪತ್ರಕರ್ತರು ನಗರದ ಟೌನ್‍ಹಾಲ್ ವೃತ್ತದ ಬಳಿ ಸಮಾವೇಶಗೊಂಡು, ಮಾನವ ಸರಪಳಿ ರಚಿಸಿ ಮಾಧ್ಯಮದವರ ಮೇಲೆ ಹಲ್ಲೆ ಮಾಡಿದವರ ಮೇಲೆ ಕ್ರಮ ಜರುಗಿಸುವಂತೆ ಘೋಷಣೆ ಕೂಗಿದರು.

ಟೌನ್‍ಹಾಲ್ ವೃತ್ತದಿಂದ ಜಿಲ್ಲಾಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಳಿಕ ಡಿಸಿ ಕಚೇರಿ ಮುಂದೆ ಕೆಲಕಾಲ ಪ್ರತಿಭಟನೆ ಮಾಡಿ ಹಲ್ಲೆ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಪರ ಜಿಲ್ಲಾಕಾರಿ ಕೆ.ಚನ್ನಬಸಪ್ಪ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು.

ಜಿಲ್ಲೆಯಾದ್ಯಂದ ಪ್ರತಿಭಟನೆ: ಪಾವಗಡ ತಾಲೂಕಿನಲ್ಲಿ ಜಿಲ್ಲೆಯ ಮಾಧ್ಯಮ ವರದಿಗಾರರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ತಾಪಂ ಕಚೇರಿ ಮುಂದೆ ತಾಲೂಕು ಕೆಯುಡಬ್ಲೂಜೆ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಹಲ್ಲೆ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಕೊರಟಗೆರೆ ತಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗೆ ಮನವಿ ಪತ್ರ ಸಲ್ಲಿಸಲಾಯಿತು. ಹಾಗೂ ತಿಪಟೂರಿನ ತಾ.ಪಂ. ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಂದ ರಾಜ್ಯ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಗುಬ್ಬಿ ಪಟ್ಟಣದ ತಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಪತ್ರಕರ್ತರು ತಹಶೀಲ್ದಾರ್ ಎಂ.ಮಮತ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಉಳಿದಂತೆ ಕುಣಿಗಲ್, ಸಿರಾ, ಮಧುಗಿರಿಯಲ್ಲಿ ನಾಳೆ ಪ್ರತಿಭಟನೆ ನಡೆಸಲಾಗುತ್ತದೆ.

ನಾಲ್ವರ ಬಂಧನ: ಘಟನೆ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ಕೋನ ವಂಶಿಕೃಷ್ಣರ ಆದೇಶದಂತೆ ಹಲ್ಲೆ ಮಾಡಿದ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು ಗ್ರಾಮಾಂತರ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ. ಉಳಿದ ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News