ಪೊಲೀಸ್ ಭದ್ರತೆ ಕೋರಿ ಚನ್ನಬಸವ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿ ಇತ್ಯರ್ಥಗೊಳಿಸಿದ ಹೈಕೋರ್ಟ್

Update: 2019-06-12 17:59 GMT

ಬೆಂಗಳೂರು, ಜೂ.12: ಸ್ಥಳೀಯರಿಂದ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ತಮಗೆ ಪೊಲೀಸ್ ಭದ್ರತೆ ನೀಡಲು ಕೋರಿ ಕೊಡಗಿನ ವಿರಾಜಪೇಟೆ ತಾಲೂಕಿನ ಬೆಟ್ಟದಪುರ ಗ್ರಾಮದ ಕನ್ನಡ ಮಠದ ಚನ್ನಬಸವದೇಶಿಕೇಂದ್ರ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಕೊಡಗು ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಪತ್ರ ಸಲ್ಲಿಸಲು ನಿರ್ದೇಶಿಸಿದೆ.

ಈ ಕುರಿತು ಚನ್ನಬಸವದೇಶಿ ಕೇಂದ್ರ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಕೆ.ಎ.ಪ್ರಕಾಶ್ ಅವರು, ಬೆಟ್ಟದಪುರ ಮಠಕ್ಕೆ ಸೇರಿದ 193 ಎಕರೆ ಜಮೀನು ಕಾನೂನು ಪ್ರಕಾರ ಮಠಕ್ಕೆ ವಾಪಸ್ ಬಂದಿದ್ದರಿಂದ ಸ್ಥಳೀಯರು ಸ್ವಾಮೀಜಿಗಳಿಗೆ ದೂರವಾಣಿ ಮೂಲಕ ಜೀವ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ, ಚನ್ನಬಸವದೇಶಿಕೇಂದ್ರ ಸ್ವಾಮೀಜಿಗೆ ಕೊಡಗು ಜಿಲ್ಲೆಯಲ್ಲಿ ಪೊಲೀಸ್ ಭದ್ರತೆ ನೀಡಿದಂತೆ ಮೈಸೂರು, ಮಂಡ್ಯ ಸೇರಿ ಇನ್ನಿತರ ಜಿಲ್ಲೆಗಳಲ್ಲೂ ಪೊಲೀಸ್ ಭದ್ರತೆ ನೀಡಲು ಕೊಡಗು ಎಸ್‌ಪಿ ಅವರಿಗೆ ನಿರ್ದೇಶಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿದಾರರ ಪರ ವಕೀಲರಿಗೆ ಸ್ವಾಮೀಜಿ ಅವರಿಗೆ ಭದ್ರತೆ ನೀಡುವ ಸಂಬಂಧ ಕೊಡಗು ಎಸ್‌ಪಿ ಅವರಿಗೆ ಮನವಿ ಪತ್ರ ಸಲ್ಲಿಸಿ, ಆ ಹಿನ್ನೆಲೆಯಲ್ಲಿ ಅವರು ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿ, ಅರ್ಜಿಯನ್ನು ಇತ್ಯರ್ಥಗೊಳಿಸಿತು.

ಹಿನ್ನೆಲೆ ಏನು: ದಾಖಲೆಗಳ ಪ್ರಕಾರ ಅಮ್ಮತ್ತಿ ಬೆಟ್ಟಗೇರಿಯ ಮಠ 1809ರಲ್ಲಿ ಆಗಿನ ಕೊಡಗಿನ ರಾಜ ವೀರರಾಜೇಂದ್ರ ಒಡೆಯರ್ ಅವರಿಂದ ಸ್ಥಾಪಿಸಲ್ಪಟ್ಟಿತ್ತು. ಅಲ್ಲದೆ, ಸುತ್ತಮುತ್ತಲಿನ ಪ್ರದೇಶವನ್ನು ಮಠಕ್ಕೆ ನೀಡಿದ್ದರು. ಬೆಟ್ಟದಪುರ ಮಠದ ಪೀಠಾಧಿಪತಿಯಾಗಿದ್ದ ಚನ್ನವೀರದೇಶಿಕೇಂದ್ರ ಸ್ವಾಮೀಜಿಗಳು 197 ಎಕರೆ ಭೂಮಿಯಲ್ಲಿ 4 ಎಕರೆ ಉಳಿಸಿಕೊಂಡು ಉಳಿದ 193 ಎಕರೆಯನ್ನು 40 ಸಾವಿರ ರೂ.ಗಳಿಗೆ 99 ವರ್ಷಗಳ ಕಾಲ ಭೂಮಿಯನ್ನು ಚೌರೀರ ಕುಟುಂಬದವರಿಗೆ ನೀಡಿದ್ದರು. ಬಳಿಕ 1972ರಲ್ಲಿ ಜಾರಿಗೆ ಬಂದ ಕರ್ನಾಟಕ ಭೂ ಸುಧಾರಣೆ ಕಾಯ್ದೆ ಪ್ರಕಾರ ಕೊಡಗಿನ ಎಲ್ಲ ಇನಾಂ ಭೂಮಿ ಸರಕಾರದ ವಶಕ್ಕೆ ಹೋಯಿತು. 99 ವರ್ಷಕ್ಕೆ ಭೋಗ್ಯಕ್ಕೆ ನೀಡಲಾಗಿದ್ದ ಈ ಆಸ್ತಿ ಕೂಡ ಸರಕಾರದ ಆಸ್ತಿಯಾಗಿತ್ತು. ಬಳಿಕ ಈ ಜಮೀನು ಚನ್ನಬಸವರ ಸ್ವಾಮೀಜಿಗಳ ಹೆಸರಿನಲ್ಲಿ ಆಸ್ತಿ ನೋಂದಾಯಿಸ್ಪಟ್ಟಿತ್ತು. ಹೀಗಾಗಿ, ಸ್ಥಳೀಯರು ಸ್ವಾಮೀಜಿಗೆ ದೂರವಾಣಿ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದರು. ಹೀಗಾಗಿ, ಚನ್ನಬಸವ ಸ್ವಾಮೀಜಿಗಳು ಪೊಲೀಸ್ ಭದ್ರತೆ ಕೆರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News