ಪಾಂಡವಪುರ: ದಲಿತ ಯುವಕನ ಬೆತ್ತಲೆ ಮೆರವಣಿಗೆ ಖಂಡಿಸಿ ರಸ್ತೆ ತಡೆ

Update: 2019-06-12 18:02 GMT

ಪಾಂಡವಪುರ, ಜೂ.12: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಶ್ಯಾನಾಡ್ರಹಳ್ಳಿಯ ದಲಿತ ಯುವಕನನ್ನು ಥಳಿಸಿ, ಬೆತ್ತಲೆ ಮೆರವಣಿಗೆ ಮಾಡಿರುವುದನ್ನು ಖಂಡಿಸಿ ದಲಿತ ಕ್ರಾಂತಿ ಸೇವಾ ಸಮಿತಿ ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಪಟ್ಟಣದ ಮಿನಿವಿಧಾನಸೌಧದ ಎದುರು ಶ್ರೀರಂಗಪಟ್ಟಣ-ಜೇವರ್ಗಿ ಹೆದ್ದಾರಿಯಲ್ಲಿ ಜಮಾವಣೆಗೊಂಡ ಸಮಿತಿ ಕಾರ್ಯಕರ್ತರು ಘಟನೆಯನ್ನು ತೀವ್ರವಾಗಿ ಖಂಡಿಸಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಚಾಮರಾಜನಗರ ಜಿಲ್ಲೆಯಲ್ಲಿ ಇತ್ತೀಚೆಗೆ ಮಾನವ ಹಕ್ಕುಗಳ ಉಲ್ಲಂಘನೆಗಳು ಹೆಚ್ಚಾಗುತ್ತಿದ್ದು, ದಲಿತ ಯುವಕ ಎಸ್.ಪ್ರತಾಪ್‍ನ ಕೈಗಳನ್ನು ಹಗ್ಗದಿಂದ  ಕಟ್ಟಿ ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವುದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನೆಪಮಾತ್ರಕ್ಕೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ ಇಬ್ಬರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಉಳಿದ ನಾಲ್ವರನ್ನೂ ಶೀಘ್ರಕ್ಕೆ ಬಂಧಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಜಿಲ್ಲೆಯಿಂದಲೇ ಅವರನ್ನು ಗಡಿಪಾರು ಮಾಡಬೇಕು. ಪ್ರತಾಪ್ ಹಾಗೂ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ದಲಿತ ಕ್ರಾಂತಿ ಸೇವಾ ಸಮಿತಿ ಅಧ್ಯಕ್ಷ ಬೊಮ್ಮರಾಜು, ಪ್ರಧಾನ ಕಾರ್ಯದರ್ಶಿ ಜಿ.ಕೆ.ರಮೇಶ್, ಮುಖಂಡರಾದ ಸಿ.ದೇವರಾಜು, ಎಂ.ಎ.ಮಂಜು, ಪಿ.ಜಯಕುಮಾರ, ಹರಿದತ್ತ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News