ಸರಕಾರಿ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಧಕ್ಕಬೇಕು: ಕೆ.ಎಚ್.ಮಹೇಂದ್ರ

Update: 2019-06-13 12:49 GMT

ಚಿಕ್ಕಮಗಳೂರು, ಜೂ.13: ಅಧಿಕಾರಿಗಳು ಸರಕಾರದಿಂದ ಬರುವ ಅನುದಾನದ ಬಗ್ಗೆ ಚುನಾಯಿತ ಪ್ರತಿನಿಧಿಗಳೊಂದಿಗೆ ಚರ್ಚಿಸಿ, ಅರ್ಹ ಫಲಾನುಭವಿಗಳನ್ನು ಗುರುತಿಸಿ ಅತ್ಯಂತ ಜವಾಬ್ದಾರಿಯಾಗಿ ಕೆಲಸ ನಿರ್ವಹಿಸಬೇಕು. ಚುನಾಯಿತ ಪ್ರತಿನಿಧಿಗಳಿಗೆ ಸೌಲಭ್ಯಗಳ ಮಾಹಿತಿ ತಿಳಿಸದೇ ಬೇಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಚ್.ಮಹೇಂದ್ರ ಅಧಿಕಾರಿಗಳಿಗೆ ಎಚ್ಚರಿಸಿದರು.

ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಬಂದಿರುವ ಸರಕಾರದ ಸೌಲಭ್ಯಗಳ ಬಗ್ಗೆ ಚುನಾಯಿತ ಪ್ರತಿನಿಧಿಗಳಿಗೆ ಯಾವುದೇ ಮಾಹಿತಿ ನೀಡದೆ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಇಂತಹ ತಪ್ಪುಗಳು ಮರುಕಳಿಸಬಾರದು. ಇದು ಪುನಾರಾವರ್ತನೆಯಾದರೆ ಕ್ರಮ ಅನಿವಾರ್ಯ ಎಂದರು.

ಮೀನುಗಾರಿಕೆ ಇಲಾಖೆ ವತಿಯಿಂದ ಮೀನುಗಾರರಿಗೆ ನೀಡುವ ಸೌಲಭ್ಯಗಳನ್ನು ಪ್ರತಿವರ್ಷ ಸೌಲಭ್ಯ ಪಡೆದ ಫಲಾನುಭವಿಗಳಿಗೆ ಮಾತ್ರ ನೀಡುತ್ತಿದ್ದಾರೆ. ಹೊಸಬರನ್ನು ಗುರುತಿಸಿ ಇಲಾಖೆಯ ಸೌಲಭ್ಯ ವಿತರಣೆಗೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿವೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ನೀಡಬೇಕೆಂದು. ಸರಕಾರದ ಸೌಲಭ್ಯಗಳು ಯಾವುದೇ ಕಾರಣಕ್ಕೂ ದುರುಪಯೋಗವಾಗಬಾರದು ಎಂದರು.

ಜಿಪಂ ಸದಸ್ಯ ಕೆ.ಆರ್.ಮಹೇಶ್ ಒಡೆಯರ್ ಮಾತನಾಡಿ, ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಕಳೆದ ವರ್ಷ 30 ಲಕ್ಷ ರೂ. ಕ್ರಿಯಾ ಯೋಜನೆ ಪಟ್ಟಿ ನೀಡಲಾಗಿದೆ. ಆದರೆ ಯಾವುದೆ ಮಾಹಿತಿ ನೀಡಿಲ್ಲ. ಈ ಬಾರಿ 35 ಲಕ್ಷ ರೂ. ಬಂದಿದ್ದರೂ ಸಮಿತಿಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಸರಿಯಾಗಿ ಸಸಿ ಮತ್ತು ಗಿಡಗಳ ಪೋಷಣೆ ಮಾಡುತ್ತಿಲ್ಲ. ಜಿಪಂ ಸದಸ್ಯರು ಸೂಚಿಸಿದ ಗ್ರಾಮಕ್ಕೆ ಸಸಿ ನೀಡುವಂತೆ ತಿಳಿಸಿದರೂ ಸಹ ಯಾವುದೆ ಸಸಿಗಳನ್ನು ನೀಡುತ್ತಿಲ್ಲ, ಅಧಿಕಾರಿಗಳು ಸಹ ಸಭೆಗೆ ಆಗಮಿಸುತ್ತಿಲ್ಲ ಎಂದು ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ದೂರು ಹೇಳಿಕೊಂಡರು.

ಜಿಪಂ ಸದಸ್ಯ ಬೆಳವಾಡಿ ರವೀಂದ್ರ ಮಾತನಾಡಿ, ಬಯಲು ಸೀಮೆಯಲ್ಲಿ ಮಳೆ ಬಾರದೆ ಜನಜಾನುವಾರುಗಳಿಗೆ ತೊಂದರೆಯಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸರಕಾರಕ್ಕೆ ಮಾಹಿತಿ ನೀಡಬೇಕು. ಯಾವುದೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುವುದರ ಜೊತೆಗೆ ಪಶು ಇಲಾಖೆಯಿಂದ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರದ ಪಶು ಚಿಕಿತ್ಸಾಲಯಗಳಿಗೆ ಔಷಧ ವಿತರಿಸಿ ಜಾನುವಾರುಗಳ ಬಗ್ಗೆ ವಿಶೇಷ ಗಮನ ಹರಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಕೆ.ಆರ್.ಪ್ರಭಾಕರ್, ಪ್ರೇಮಾ ಮಂಜುನಾಥ್, ಅನುಸೂಯಾ ಗೋಪಿಕೃಷ್ಣ, ಸುಧಾಯೋಗೀಶ್, ಜಿಪಂ ಉಪಕಾರ್ಯದರ್ಶಿ ರಾಜಗೋಪಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News