ಚಿಕ್ಕಮಗಳೂರು: ಜಿಂದಾಲ್ ಕಂಪೆನಿಗೆ ಭೂಮಿ ಮಾರಾಟ ಖಂಡಿಸಿ ಬಿಜೆಪಿ ಧರಣಿ

Update: 2019-06-13 13:14 GMT

ಚಿಕ್ಕಮಗಳೂರು, ಜೂ.13: ಸಮ್ಮಿಶ್ರ ಸರಕಾರದ ಕಾನೂನು ಉಲ್ಲಂಘಿಸಿ ಜಿಂದಾಲ್ ಕಂಪೆನಿಗೆ ಅತ್ಯಂತ ಕಡಿಮೆ ದರಕ್ಕೆ 3667 ಎಕರೆ ಸರಕಾರಿ ಭೂಮಿ ಮಾರಾಟ ಮಾಡಲು ಮುಂದಾಗಿದ್ದು, ಈ ವ್ಯವಹಾರದಲ್ಲಿ ಸರಕಾರದ ಪ್ರಮುಖರು ಕೋಟ್ಯಾಂತರ ರೂ. ಭ್ರಷ್ಟಾಚಾರ ಎಸಗಿರುವ ಶಂಕೆ ಮೂಡುತ್ತಿದೆ. ರಾಜ್ಯ ಸರಕಾರ ಈ ಕೂಡಲೇ ಜಿಂದಾಲ್ ಕಂಪೆನಿಗೆ ಭೂಮಿ ಮಾರಾಟ ಪ್ರಕ್ರಿಯೆಯನ್ನು ಕೈಬಿಡಬೇಕು. ತಪ್ಪಿದಲ್ಲಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಸಂಸದೆ ಶೋಭಾ ಕರಂದ್ಲಾಜೆ ಎಚ್ಚರಿಸಿದ್ದಾರೆ.

ಗುರುವಾರ ನಗರದ ಆಝಾದ್ ಪಾರ್ಕ್ ವೃತ್ತದಲ್ಲಿ ಜಿಲ್ಲಾ ಯುವಮೋರ್ಚಾದ ವತಿಯಿಂದ ಹಮ್ಮಿಕೊಂಡಿದ್ದ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 2006-07ರಲ್ಲಿ ರಾಜ್ಯದಲ್ಲಿದ್ದ ಬಿಜೆಪಿ-ಜೆಡಿಎಸ್ ಮೈತ್ರಿ ಸರಕಾರದ ಅವಧಿಯಲ್ಲಿ ಜಿಂದಾಲ್ ಕಂಪೆನಿಗೆ 10 ವರ್ಷಗಳ ಅವಧಿಗೆ ಭೂಮಿ ನೀಡುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದ ಲೀಸ್ ಕಮ್ ಸೇಲ್ ಒಪ್ಪಂದವಾಗಿದ್ದು, ಕಂಪೆನಿಗೆ ಭೂಮಿ ಮಾರಾಟ ಮಾಡುವ ಒಪ್ಪಂದವಾಗಿರಲಿಲ್ಲ. ಆದರೆ ಈಗಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಈ ಒಪ್ಪಂದವನ್ನು ವಿಸ್ತರಣೆ ಮಾಡಿ, ಎಕರೆಗೆ ಕೇವಲ 1,22,000 ರೂ.ನಂತೆ 3667 ಎಕರೆ ಭೂಮಿಯನ್ನು ಸೇಲ್ ಡೀಲ್ ಮಾಡಲು ಮುಂದಾಗಿ ಕಿಕ್ ಬ್ಯಾಕ್ ಪಡೆಯುವ ಹುನ್ನಾರ ನಡೆಸಿದ್ದಾರೆಂದು ಆರೋಪಿಸಿದರು.

ರಾಜ್ಯದ ಅಭಿವೃದ್ಧಿಗೆ ಕೈಗಾರಿಕೆಗಳ ಆವಶ್ಯಕತೆ ಇದೆಯಾದರೂ ಸರಕಾರಿ ಭೂಮಿಯನ್ನು ಅಕ್ರಮವಾಗಿ ಕಂಪೆನಿಗಳಿಗೆ ನೀಡುವುದಕ್ಕೆ ತಮ್ಮ ವಿರೋಧವಿದೆ. ಸರಕಾರಿ ಭೂಮಿಯನ್ನು ಲೀಸ್‍ಗೆ ನೀಡಲು ಬಿಜೆಪಿಯ ವಿರೋಧವಿಲ್ಲ. ಆದರೆ ಮಾರಾಟ ಮಾಡಲು ವಿರೋಧವಿದೆ ಎಂದ ಅವರು, ಹಿಂದಿನ ಒಪ್ಪಂದದಂತೆ ಜಿಂದಾಲ್ ಕಂಪನಿ ಸಿ ಮತ್ತು ಡಿ ಹುದ್ದೆಗಳನ್ನು ಕನ್ನಡಿಗರಿಗೆ ನೀಡಬೇಕೆಂಬ ಷರತ್ತನ್ನು ಈಡೇರಿಸಿಲ್ಲ. ಮೂಲಸೌಕರ್ಯ ಅಭಿವೃದ್ಧಿಗೆಂದು ಪಡೆದ ಸರಕಾರಿ ಜಾಗದಲ್ಲಿ ಜಿಂದಾಲ್ ಕಂಪೆನೆ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದೆ. ಸರಕಾರ ನೀಡಿದ 2 ಟಿಎಂಸಿ ನೀರು ಬಳಕೆಯ ಷರತ್ತು ಉಲ್ಲಂಘಿಸಿ 5 ಟಿಎಂಸಿ ನೀರನ್ನು ಬಳಸಿಕೊಳ್ಳುವ ಮೂಲಕ ಜಿಂದಾಲ್ ಕಂಪೆನಿ ಸರಕಾರದ ನಿಬಂಧನೆಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ ಶೋಭಾ ಕರಂದ್ಲಾಜೆ, ಇಂತಹ ಕಂಪೆನಿಗೆ ರಾಜ್ಯ ಸರಕಾರ ಮತ್ತೆ ಅತ್ಯಂತ ಕಡಿಮೆ ದರಕ್ಕೆ ಭೂಮಿ ಮಾರಾಟ ಮಾಡಲು ಮುಂದಾಗಿರುವುದರ ಹಿಂದೆ ಸರಕಾರದ ಹಣ ಲೂಟಿ ಮಾಡುವ ಉದ್ದೇಶ ಮಾತ್ರ ಇದೆ ಎಂದು ದೂರಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಜೀವರಾಜ್ ಮಾತನಾಡಿ, ರಾಜ್ಯಾದ್ಯಂತ ಲಕ್ಷಾಂತರ ರೈತರು ಸರಕಾರಿ ಭೂಮಿಯನ್ನು ಕೃಷಿಗಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಇಂತಹ ರೈತರಿಗೆ ಭೂಮಿ ನೀಡಲು ಒಪ್ಪದ ರಾಜ್ಯ ಸರಕಾರದ ಅತ್ಯಂತ ಕಡಿಮೆ ದರಕ್ಕೆ ಭೂಮಿಯನ್ನು ಜಿಂದಾಲ್ ಕಂಪೆನಿಗೆ ಮಾರಾಟ ಮಾಡಲು ಹೊರಟಿರುವುದರ ಹಿಂದೆ ಕಿಕ್ ಬ್ಯಾಕ್ ಪಡೆಯುವ ಉದ್ದೇಶವಿದೆ ಎಂಬ ಶಂಕೆ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಸರಕಾರಕ್ಕೆ ಜನರ ಬಗ್ಗೆ ಕಾಳಜಿ ಇರುವುದು ನಿಜವಾದರೆ ರೈತರು ಒತ್ತುವರಿ ಮಾಡಿಕೊಂಡಿರುವ ಜಮೀನನನ್ನು ಕಡಿಮೆ ದರದಲ್ಲಿ ಲೀಸ್‍ಗೆ ನೀಡಲಿ, ಇದನ್ನು ಬಿಟ್ಟು ಜಿಂದಾಲ್ ಕಂಪೆನಿಗೆ ಕಡಿಮೆ ದರದಲ್ಲಿ ಸರಕಾರಿ ಜಾಗ ಮಾರಾಟ ಮಾಡಲು ಮುಂದಾಗಿರುವುದು ನಾಚಿಕೆಗೇಡಿನ ಕೆಲಸ. ಕೂಡಲೇ ರಾಜ್ಯ ಸರಕಾರ ಈ ಒಪ್ಪಂದದಿಂದ ಹಿಂದೆ ಸರಿಯಬೇಕು. ತಪ್ಪಿದ್ದಲ್ಲಿ ಉಗ್ರ ಪ್ರತಿಭಟನೆ ಅನಿವಾರ್ಯ ಎಂದರು.

ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಪುಣ್ಯಪಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಧರಣಿಯಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಡಿ.ತಮ್ಮಯ್ಯ, ಜಿಪಂ ಸದಸ್ಯೆ ಜಸಿಂತಾ ಅನಿಲ್‍ಕುಮಾರ್, ಜಿಪಂ ಸದಸ್ಯ ಸೋಮಶೇಖರ್, ತಾಪಂ ಅಧ್ಯಕ್ಷ ಜಯಣ್ಣ, ಮುಖಂಡರಾದ ಪ್ರೇಮ್‍ಕುಮಾರ್, ದೀಪಕ್ ದೊಡ್ಡಯ್ಯ, ವರಸಿದ್ದಿ ವೇಣುಗೋಪಾಲ್, ಸಿ.ಎಚ್.ಲೋಕೇಶ್, ರಾಜ್‍ಶೇಖರ್, ನಾರಾಯಣಗೌಡ, ಭೋಜೇಗೌಡ, ದೇವರಾಜ್ ಶೆಟ್ಟಿ, ಸಿಡಿಎ ಮಾಜಿ ಅಧ್ಯಕ್ಷ ರಾಜಪ್ಪ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News