ಸೇವೆಗೆ ಜಾತಿ, ಧರ್ಮ ಇಲ್ಲವೆಂದು ಸಿದ್ದಗಂಗಾ ಶ್ರೀ ತೋರಿಸಿಕೊಟ್ಟರು: ಸಂಸದೆ ಸುಮಲತಾ

Update: 2019-06-13 14:31 GMT

ಮಂಡ್ಯ, ಜೂ.13: ಸೇವೆಗೆ ಜಾತಿ, ಧರ್ಮ ಇಲ್ಲ ಎಂಬುದನ್ನು ತೋರಿಸಿಕೊಟ್ಟವರು ಸಿದ್ದಗಂಗಾ ಮಠದ ಶ್ರೀ ಡಾ.ಶಿವಕುಮಾರ ಸ್ವಾಮೀಜಿಗಳು ಎಂದು ಸಂಸದೆ ಸುಮಲತಾ ಅಂಬರೀಷ್ ಸ್ಮರಿಸಿದ್ದಾರೆ.

ತಾಲೂಕಿನ ಮಾಚಹಳ್ಳಿಯಲ್ಲಿ ಗುರುವಾರ ಸ್ವಾಮೀಜಿ ಅವರ ಹೆಸರಿನಲ್ಲಿ ನಿರ್ಮಿಸಿರುವ ಮಹಾದ್ವಾರ ಉದ್ಘಾಟನೆ, ಶ್ರೀಗಳ ಪುತ್ಥಳಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಅವರು ಮಾತನಾಡಿದರು.

ಜನರ ಸೇವೆಯ ಮೂಲಕ ತಾವು ನಡೆದಾಡುವ ದೇವರು ಎಂದು ಸಾಬೀತುಪಡಿಸಿದರು. ಅವರ ಆಶೀರ್ವಾದ, ಮಾರ್ಗದರ್ಶನ ಎಲ್ಲರಿಗೂ ಇದ್ದೇ ಇರುತ್ತದೆ. ಅವರು ನಡೆದುಕೊಂಡ ಬಂದ ಹಾದಿ ಎಲ್ಲರಿಗೂ ಸ್ಪೂರ್ತಿಯಾಗಿದೆ ಎಂದು ಅವರು ಹೇಳಿದರು.

ಲೋಕಸಭೆ ಚುನಾವಣೆ ಗೆಲುವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಸಮಯ ವ್ಯರ್ಥ ಮಾಡದೇ ಜನರ ಸೇವೆ ಮಾಡುತ್ತೇನೆ. ಕಾಯ, ವಾಚ ನನ್ನ ಗುರಿ ಮಂಡ್ಯದ ಅಭಿವೃದ್ಧಿಯಾಗಿದೆ ಎಂದು ಅವರು ಭರವಸೆ ನೀಡಿದರು.

ರೈತಸಂಘದ ಸುನೀತಾ ಪುಟ್ಟಣ್ಣಯ್ಯ, ದರ್ಶನ್ ಪುಟ್ಟಣ್ಣಯ್ಯ, ಕಾರ್ಯಕರ್ತರು, ಕಾಂಗ್ರೆಸ್, ಬಿಜೆಪಿ ಮತ್ತಿತರ ಪ್ರಗತಿಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ನನ್ನ ಗೆಲುವಿಗೆ ಕಾರಣರಾದರು ಎಂದು ಕೃತಜ್ಞತೆ ಸಲ್ಲಿಸಿದರು.

ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮೀಜಿ, ವೈದ್ಯನಾಥಪುರ ಕದಂಬ ಜಂಗಮಮಠದ ರೇಣುಕಾ ಶಿವಾಚಾರ್ಯಸ್ವಾಮಿ, ಬೇಬಿಬೆಟ್ಟದ ಗುರುಸಿದ್ದೇಶ್ವರಸ್ವಾಮಿ, ಅವ್ವೇರಹಳ್ಳಿ ಪಟ್ಟದಹೊಸಮಠದ ಸಿದ್ದಲಿಂಗಶಿವಾಚಾರ್ಯಸ್ವಾಮಿ ಆಶೀರ್ವಚನ ನೀಡಿದರು.

ಸುನೀತಾ ಪುಟ್ಟಣ್ಣಯ್ಯ, ಮಾಜಿ ಶಾಸಕ ಇ.ಅಶ್ವತ್ಥ್ ನಾರಾಯಣ, ಚಿತ್ರನಟರಾದ ರಾಕ್‍ಲೈನ್ ವೆಂಕಟೇಶ್, ದೊಡ್ಡಣ್ಣ, ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಸ್.ನಾಗರಾಜು, ಚಂದ್ರಶೇಖರ್, ರಾಜು, ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News