ತನ್ನ ಬೆಂಬಲಿಗರು- ಜೆಡಿಎಸ್ ಕಾರ್ಯಕರ್ತರ ನಡುವಿನ ವಾಗ್ವಾದಕ್ಕೆ ಸುಮಲತಾ ಬೇಸರ

Update: 2019-06-13 14:33 GMT

ಮಂಡ್ಯ, ಜೂ.13: ಕನಗನಮರಡಿ ಬಸ್ ದುರಂತದಲ್ಲಿ ಮಡಿದ ಕುಟುಂಬಕ್ಕೆ ಕೇಂದ್ರ ಸರಕಾರದಿಂದ ತಲಾ 2 ಲಕ್ಷ ರೂ. ಪರಿಹಾರ ಸಂಬಂಧ ಜೆಡಿಎಸ್ ಕಾರ್ಯಕರ್ತರು ಹಾಗೂ ತನ್ನ ಬೆಂಬಲಿಗರ ನಡುವೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ವಾಗ್ವಾದಕ್ಕೆ ಸಂಸದೆ ಸುಮಲತಾ ಅಂಬರೀಷ್ ಬೇಸರ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ದುರಂತದ ಸಂಗತಿ. ಆ ಕುಟುಂಬಗಳಿಗೆ ಅನುದಾನ ತಲುಪಿರೋದು ಮುಖ್ಯ. ನಾನು ಕೊಟ್ಟಿದ್ದೀನಿ, ನೀವು ಕೊಟ್ಟಿಲ್ಲ ಅನ್ನೋದು ತುಂಬಾ ತಪ್ಪಾಗುತ್ತೆ. ಆ ರೀತಿ ತಪ್ಪು ಯಾರೂ ಮಾಡಬಾರದು. ನಾನಂತೂ ಆ ತಪ್ಪು ಮಾಡೋದಿಲ್ಲ ಎಂದರು.

ಹಿಂದಿನಿಂದಲೂ ನಾನು ಸಾಕಷ್ಟು ಸಲ ಹೇಳಿಕೊಂಡು ಬಂದಿದ್ದೇನೆ. ಸಾಧನೆಗಳು ನಮ್ಮ ಬಗ್ಗೆ ಮಾತಾಡಬೇಕು. ಆದರೆ, ನಾವು ನಮ್ಮ ಸಾಧನೆಗಳ ಬಗ್ಗೆ ಮಾತಾಡಬಾರದು. ನನ್ನ ಕೆಲಸ ಈಗಷ್ಟೇ ಆರಂಭವಾಗಿದೆ. ಅದನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುವ ನಂಬಿಕೆ ನನಗಿದೆ. ಅಧಿವೇಶನದ ಬಳಿಕ ಕ್ಷೇತ್ರ ಪ್ರವಾಸ ಮಾಡುತ್ತೇನೆ ಎಂದು ಅವರು ಹೇಳಿದರು.

ಬಜೆಟ್‍ನಲ್ಲಿ ಮಂಡ್ಯ ಜಿಲ್ಲೆಗೆ ಸಾಕಷ್ಟು ಕೊಡುಗೆ ನೀಡುವ ವಿಶ್ವಾಸ ಇದೆ. ಈ ಕುರಿತು ಸಂಬಂಧಪಟ್ಟ ಸಚಿವರ ಜೊತೆ ಚರ್ಚೆ ಮಾಡುತ್ತೇನೆ. ಮಂಡ್ಯ ರೈತರ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡುತ್ತೇನೆ ಎಂದು ಅವರು ತಿಳಿಸಿದರು.

ಮೈಷುಗರ್ ಸಕ್ಕರೆ ಕಾರ್ಖಾನೆ ಖಾಸಗೀಕರಣ ಬೇಕೆ? ಬೇಡವೆ? ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರೈತರಿಗೆ ಒಳ್ಳೆಯದಾಗುವಂತಹ ನಿರ್ಧಾರ ತೆಗೆದುಕೊಂಡರೆ ಸಹಕಾರವಿದೆ. ತಜ್ಞರ ಜತೆ ಚರ್ಚಿಸಿ ಯಾವುದು ಸೂಕ್ತವೆಂದು ನಂತರ ಮಾತಾಡುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News