ದಾವಣಗೆರೆ: ಪುನರ್ವಸತಿ ಕಲ್ಪಿಸಲು ಆಗ್ರಹಿಸಿ ದೇವದಾಸಿ ಮಹಿಳೆಯರ ವಿಮೋಚನ ಸಂಘದಿಂದ ಧರಣಿ

Update: 2019-06-13 14:37 GMT

ದಾವಣಗೆರೆ, ಜೂ.13: ದೇಶವ್ಯಾಪ್ತಿಯಾಗಿ ದೇವದಾಸಿ ಮಹಿಳೆಯರ ಹಾಗೂ ಅವರ ಕುಟುಂಬದ ಸದಸ್ಯರ ಗಣತಿ ನಡೆಸಿ ಅವರಿಗೆ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನ ಸಂಘದ ಜಿಲ್ಲಾ ಸಮಿತಿ ಆಶ್ರಯದಲ್ಲಿ ಸದಸ್ಯರು ಧರಣಿ ನಡೆಸಿದರು. 

ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಧರಣಿ ನಡೆಸಿ ಡಿಸಿ ಅವರ ಮುಖಾಂತರ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು. 
ಈ ಸಂದರ್ಭ ಮಾತನಾಡಿದ ಸಂಘಟನೆ ಮುಖಂಡ ಕೆ.ಎಲ್.ಭಟ್, ದೇಶದಲ್ಲಿ ದೇವದಾಸಿ ಪದ್ದತಿ ನಿಷೇಧವಿದ್ದರೂ ದೇಶದ ಕರ್ನಾಟಕ, ಆಂಧ್ರ, ತೆಲಂಗಣಾ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಈಗಲೂ ಅಲ್ಲಲ್ಲಿ ಮುಂದುವರೆದಿದೆ. ಕರ್ನಾಟಕದಲ್ಲಿ ಮಾತ್ರ ಸರಕಾರದ ಗಣತಿ ಪ್ರಕಾರ 60 ಸಾವಿರದಷ್ಟು ಮತ್ತು ಗಣತಿ ಇಲ್ಲದ ಸಾವಿರಾರರು ಕುಟುಂಬಗಳು ಸೇರಿ ಒಂದು ಲಕ್ಷ ಕುಟುಂಬಗಳಿರುವ ಅಂದಾಜಿದೆ. ಎಸ್ಸಿ,ಎಸ್ಟಿ ಮತ್ತು ಹಿಂದುಳಿದ ವರ್ಗ ಈ ದೌರ್ಜನ್ಯಕ್ಕೆ ಒಳಗಾಗಿದೆ ಎಂದು ಹೇಳಿದರು. 

ಈ ಕುಟುಂಬಗಳ ಸ್ಥಿತಿ ತುಂಬ ಹೀನಾಯವಾಗಿದೆ. ಅಲ್ಲದೇ ಹೆಣ್ಣು ಮಕ್ಕಳ ಸ್ಥಿತಿ ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ಇಂತಹ ಅನೇಕ ಕಷ್ಟಗಳಿಂದ ಈ ಕುಟುಂಬಗಳನ್ನು ಮೇಲೆತ್ತುವುದು ಮತ್ತು ಇಂತಹ ಅಮಾನವೀಯ ದೌರ್ಜನ್ಯದ ಪದ್ದತಿಯನ್ನು ಕೊನೆಗಾಣಿಸುವ ಅಗತ್ಯವಿದೆ. ಅದ್ದರಿಂದ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ದೇವದಾಸಿ ಪದ್ದತಿ ನಿಷೇಧದ ಕಾಯ್ದೆಗೆ ಅಗತ್ಯ ತಿದ್ದುಪಡಿ ಮಾಡಿ, ಸಮಗ್ರ ಪುನರ್ವಸತಿ ಕ್ರಮಗಳನ್ನು ಸೇರ್ಪೆಡೆ ಮಾಡಬೇಕು ಹಾಗೂ ಬಜೆಟ್‍ನಲ್ಲಿ ಅಗತ್ಯ ನೆರವು ಘೋಷಿಸುವಂತೆ ಮನವಿ ಮಾಡಿದರು. 

ಗಣತಿ ನಡೆಸಿ ಪುನರ್ವಸತಿ ಕಲ್ಪಿಸಬೇಕು, ದೇವದಾಸಿ ಪದ್ದತಿಗೆ ತಿದ್ದುಪಡಿ ತರಬೇಕು, ಮಾಸಿಕ 5 ಸಾವಿರ ಸಹಾಯ ಧನ ಕೇಂದ್ರ ಸರಕಾರ ಒದಗಿಸಬೇಕು, ಆ ಕುಟುಂಬಗಳಿಗೆ 5 ಎಕರೆ ಜಾಗ, ನಿವೇಶನ ಕೊಡಬೇಕು, ಸ್ವ ಉದ್ಯೋಗದಲ್ಲಿ ತೊಡಗಿಕೊಳ್ಳಲು ತರಬೇತಿ ಸಹಿತ ಸಹಾಯಧನ ಸಾಲಗಳನ್ನು ಕಲ್ಪಿಸಬೇಕು, ಉದ್ಯೋಗ ಖಾತ್ರಿ 200 ದಿನಗಳ ಕಾಲ ಕಡ್ಡಾಯವಾಗಿ ನೀಡಬೇಕು , ಎಸ್ಸಿ-ಎಸ್ಟಿ ಜನರ ಜನಸಂಖ್ಯೆ ಅನುಗುಣವಾಗಿ ಬಜೆಟ್‍ನಲ್ಲಿ ಅನುದಾನ ಒದಗಿಸುವ ಶಾಸನ ಜಾರಿಗೊಳಿಸಬೇಕು ಎನ್ನುವ ಹಕ್ಕೋತ್ತಾಯಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು. 

ಸಂಘಟನೆಯ ರಾಜ್ಯಾಧ್ಯಕ್ಷೆ ಟಿ.ವಿ.ರೇಣುಕಾಮ್ಮ, ಹಿರಿಯಮ್ಮ, ಮೈಲಮ್ಮ, ಚನ್ನಮ್ಮ, ಮುತ್ತಮ್ಮ, ಹೊನ್ನಮ್ಮ, ಸಿದ್ದಮ್ಮ, ಮಂಜುಳಾ, ಭಾಗ್ಯ, ಹನುಮಕ್ಕ , ರೇಣುಕಮ್ಮ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News