ಐಎಂಎ ವಂಚನೆ ಪ್ರಕರಣ: ಶಿವಮೊಗ್ಗದಲ್ಲಿ ಪ್ರತ್ಯೇಕ ದೂರು ಕೇಂದ್ರ ಸ್ಥಾಪನೆ

Update: 2019-06-13 15:39 GMT

ಶಿವಮೊಗ್ಗ, ಜೂ. 13: ಸಾರ್ವಜನಿಕರಿಂದ ಸಾವಿರಾರು ಕೋಟಿ ರೂ. ಸಂಗ್ರಹಿಸಿ ವಂಚಿಸಿದ ಆರೋಪ ಎದುರಿಸುತ್ತಿರುವ ಐಎಂಎ (ಐ ಮಾನಿಟರಿ ಅಡ್ವೈಸರಿ) ಕಂಪೆನಿಯಿಂದ ಮೋಸಕ್ಕೊಳಗಾದ ನೊಂದ ನಾಗರಿಕರ ದೂರುಗಳನ್ನು ದಾಖಲಿಸಿಕೊಳ್ಳಲು ಜಿಲ್ಲಾ ಪೊಲೀಸ್ ಇಲಾಖೆಯು ದೂರು ಕೇಂದ್ರ ಸ್ಥಾಪಿಸಿದೆ. 

ನಗರದ ಕೋಟೆ ರಸ್ತೆಯಲ್ಲಿರುವ ಸಿಇಎನ್ ಪೊಲೀಸ್ ಠಾಣೆಯಲ್ಲಿ ಈ ದೂರು ಕೇಂದ್ರ ಸ್ಥಾಪಿಸಲಾಗಿದೆ ಎಂದು ಗುರುವಾರ ಜಿಲ್ಲಾ ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. 

ಐಎಂಎ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿರುವ ಸಾರ್ವಜನಿಕರಿಗೆ ಸದರಿ ಕಂಪನಿಯು ವಂಚಿಸಿದ ಬಗ್ಗೆ ಬೆಂಗಳೂರು ನಗರದಲ್ಲಿ ಹಲವಾರು ದೂರುಗಳು ದಾಖಲಾಗಿವೆ. ಈ ಕುರಿತಂತೆ ಶಿವಮೊಗ್ಗ ಜಿಲ್ಲೆಯಲ್ಲಿರುವ ಸಾರ್ವಜನಿಕರು ಈ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದಲ್ಲಿ ದೂರುಗಳನ್ನು ಸ್ವೀಕರಿಸಿ, ಪ್ರಕರಣ ದಾಖಲಿಸಲು ಪ್ರತ್ಯೇಕ ದೂರು ಕೇಂದ್ರ ತೆರೆಯಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. 

ಐಎಂಎ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದಲ್ಲಿ ಸಂಬಂಧಪಟ್ಟ ಎಲ್ಲ ದಾಖಲಾತಿಗಳೊಂದಿಗೆ ಶಿವಮೊಗ್ಗ ನಗರದ ಕೋಟೆ ರಸ್ತೆಯಲ್ಲಿರುವ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News