ಸಂಪುಟಕ್ಕೆ ಆರ್.ಶಂಕರ್ ಸೇರ್ಪಡೆಗೆ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ್ ವಿರೋಧ

Update: 2019-06-13 15:41 GMT

ಬೆಂಗಳೂರು, ಜೂ. 13: ಸಚಿವ ಸಂಪುಟ ವಿಸ್ತರಣೆ ನಾಳೆ(ಜೂ.14) ನಡೆಯಲಿದ್ದು, ಪಕ್ಷೇತರ ಶಾಸಕ ಆರ್.ಶಂಕರ್ ಸಂಪುಟ ಸೇರ್ಪಡೆಗೆ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ್ ಇಂದಿಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಪುಟಕ್ಕೆ ಇಬ್ಬರು ಪಕ್ಷೇತರ ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳುವ ಅನಿವಾರ್ಯ ಸ್ಥಿತಿ ಬಂದಿದೆ. ಸರಕಾರ ಉಳಿಸಿಕೊಳ್ಳಲು ಹೈಕಮಾಂಡ್ ಇಬ್ಬರಿಗೆ ಸ್ಥಾನ ನೀಡಲು ನಿರ್ಧರಿಸಿದೆ ಎಂದರು.

ಮೈತ್ರಿ ಸರಕಾರ ರಚನೆಯಿಂದ ಪಕ್ಷಕ್ಕೆ ಪೆಟ್ಟು ಬೀಳುತ್ತಿದೆ. ಜೆಡಿಎಸ್ ಮಂತ್ರಿಗಳು ನಮ್ಮ ಪಕ್ಷದ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಮೊದಲೇ ವಿಪಕ್ಷ ಸ್ಥಾನದಲ್ಲಿ ಕೂತಿದ್ದರೆ ಪಕ್ಷಕ್ಕೆ ಅನುಕೂಲ ಆಗುತ್ತಿತ್ತು ಎಂದ ಅವರು, ಇದರಿಂದ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದಿತ್ತು ಎಂದರು.

ಮಧ್ಯಂತರ ಚುನಾವಣೆ: ಮಧ್ಯಂತರ ಚುನಾವಣೆ ಸಾಧ್ಯತೆಗಳಿದ್ದು, ಇವತ್ತೇ ಚುನಾವಣೆ ನಡೆದರೂ ನಾನು ಎದುರಿಸಲು ಸಿದ್ದ. ಆರ್.ಶಂಕರ್ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅವರು ಕ್ಷೇತ್ರದ ಜನರಿಗೆ ಕೈಗೆ ಸಿಗುವುದಿಲ್ಲ ಎಂದು ದೂರಿದರು. ಮುಂದಿನ ಚುನಾವಣೆಯಲ್ಲಿ ಯಾರ ನೇತೃತ್ವದಲ್ಲಿ ನಡೆಯಬೇಕೆಂದು ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಸಮರ್ಥರಿದ್ದಾರೆ. ಕೆಲ ಸಂದರ್ಭದಲ್ಲಿ ಸತ್ಯ ಸಂಗತಿಗಳನ್ನು ಹೇಳಲೇಬೇಕಾಗುತ್ತದೆ ಎಂದು ಕೋಳಿವಾಡ್ ನುಡಿದರು.

ಮಾಜಿ ಸಿಎಂ ಯಡಿಯೂರಪ್ಪರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದಲೇ ತೆಗೆಯುವ ಸಾಧ್ಯತೆಗಳಿದ್ದು, ಅವರು ಮತ್ತೊಮ್ಮೆ ಸಿಎಂ ಆಗುವುದು ಅನುಮಾನ. ಮಧ್ಯಂತರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಬಂದು ಶಾಸಕರು ಸಿದ್ದರಾಮಯ್ಯ ಸಿಎಂ ಆಗಲಿ ಎಂದರೆ ನನ್ನದೇನು ಅಭ್ಯಂತರವಿಲ್ಲ ಎಂದರು.

‘ರಾಣೆಬೆನ್ನೂರು ಕ್ಷೇತ್ರದ ಪಕ್ಷೇತರ ಶಾಸಕ ಆರ್.ಶಂಕರ್ ದೊಡ್ಡ ಅವಕಾಶವಾದಿ. ಕೆಲ ಸಂದರ್ಭಗಳಲ್ಲಿ ಅನಿವಾರ್ಯ ಸ್ಥಿತಿಯಲ್ಲಿ ಅವಕಾಶವಾದಿಗಳ ಕೈ ಮೇಲಾಗುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಸಚಿವರಾಗಿದ್ದ ಅವರು, ಆ ಬಳಿಕ ಬಿಜೆಪಿಗೆ ಹೋಗಿ ಇದೀಗ ಮತ್ತೆ ಕಾಂಗ್ರೆಸ್-ಜೆಡಿಎಸ್ ಸರಕಾರಕ್ಕೆ ಬೆಂಬಲಕ್ಕೆ ಮುಂದಾಗಿದ್ದಾರೆ’

-ಕೆ.ಬಿ.ಕೋಳಿವಾಡ್, ಮಾಜಿ ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News