"ಮಾಧ್ಯಮದ ಮುಂದೆ ಅಲ್ಲ, ಹೋಗಿ ಎಸ್‍ಐಟಿ ಮುಂದೆ ಹೇಳಪ್ಪಾ"

Update: 2019-06-13 18:35 GMT

ಮೈಸೂರು,ಜೂ.13: ಐಎಂಎ ವಿಚಾರದಲ್ಲಿ ನನ್ನನ್ನು ಸಿಲುಕಿಸಿದ್ದಾರೆ ಎಂಬ ರೋಷನ್ ಬೇಗ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಅದನ್ನು ಮಾಧ್ಯಮದ ಮುಂದೆ ಏಕೆ ಹೇಳ್ತಿಯಾ, ಹೋಗಿ ಎಸ್‍ಐಟಿ ಮುಂದೆ ಹೇಳಪ್ಪಾ ಎಂದು ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐಎಂಎ ವಿಚಾರದಲ್ಲಿ ಎಸ್ಐಟಿ ರಚನೆ ಆಗಿದೆ. ಎಸ್ಐಟಿ ಸಂಪೂರ್ಣವಾಗಿ ತನಿಖೆ ನಡೆಸಲಿದೆ. ಆ ಬಗ್ಗೆ ನಾನು ಸಾರ್ವಜನಿಕವಾಗಿ ಮಾತನಾಡಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿಚಾರದಲ್ಲಿ ಸತ್ಯ ಹೇಳುವಂತಿಲ್ಲ, ಪುಲ್ವಾಮಾ ಘಟನೆ ಬಗ್ಗೆ ನಾವು ಪ್ರಶ್ನೆ ಕೇಳುವಂತಿಲ್ಲ. ನಾವು ಸತ್ಯ ಹೇಳಲಾಗದಂತಹ ಕಷ್ಟದ ಪರಿಸ್ಥಿತಿಯಲ್ಲಿದ್ದೇವೆ. ನೋಡಿ ನಮ್ಮ ಪರಿಸ್ಥಿತಿ ಹೇಗಿದೆ ಅಂತ. ನರೇಂದ್ರ ಮೊದಿ ಒಬ್ಬನೇ ದೇಶಭಕ್ತ, ಅವನಿಂದಲೇ ದೇಶ ಉಳಿಯುವುದು ಎಂದು ಬಿಂಬಿಸಲಾಯಿತು. ಮಾಧ್ಯಮಗಳು ಸೇರಿದಂತೆ ಎಲ್ಲರೂ ಮೋದಿ ಮೋದಿ ಎಂದರು ಎಂದು ಬೇಸರ ವ್ಯಕ್ತಪಡಿಸಿದರು.

ದೇಶದ ಜಿಡಿಪಿ ಎಷ್ಟು ಕುಸಿದಿದೆ ಅಂತ ನೋಡಿ. ಮೋದಿ ಆಡಳಿತದ ಐದು ವರ್ಷ ಯಾವುದೇ ರೀತಿಯಲ್ಲೂ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲಿಲ್ಲ. ಬರೀ ಭಾಷಣ, ಸುಳ್ಳು, ಪ್ರಚಾರ ಮಾಡಿಕೊಂಡೆ ತಿರುಗಿದರು. ಅದಕ್ಕೆ ಮಾಧ್ಯಮದವರೂ ಸಹಕರಿಸಿದರು. ಇದನ್ನು ಕೂಡ ನಾವು ಪ್ರಶ್ನೆ ಮಾಡಬಾರದಾ? ಸಂವಿಧಾನದಲ್ಲಿ ನಮಗೆ ಪ್ರಶ್ನೆ ಮಾಡುವ ಹಕ್ಕಿಲ್ಲವೇ. ಇನ್ನೂ ಐದು ವರ್ಷ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News