ಐಎಂಎ ವಂಚನೆ ಪ್ರಕರಣ: ಮೈಸೂರಿನಲ್ಲೂ ದೂರು ದಾಖಲು
Update: 2019-06-13 23:28 IST
ಮೈಸೂರು,ಜೂ,13: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಮನ್ಸೂರ್ ವಿರುದ್ಧ ಮೈಸೂರಿನಲ್ಲಿಯೂ ವಂಚನೆ ದೂರು ದಾಖಲಾಗಿದೆ.
ನಿನ್ನೆಯಷ್ಟೇ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ಹೇಳಿಕೆ ನೀಡಿ, ಐಎಂಎ ಸಂಸ್ಥೆಯಿಂದ ವಂಚನೆಗೊಳಗಾದ ಮೈಸೂರಿಗರು ಇಲ್ಲೇ ದೂರು ನೀಡಬಹುದು ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ದೂರು ನೀಡಲು ಮೋಸ ಹೋದವರು ಸರದಿ ಸಾಲಿನಲ್ಲಿ ಬಂದು ದೂರು ನೀಡಿದರು.
ಈ ಸಂಬಂಧ ನಗರದ ಉದಯಗಿರಿ ಪೊಲೀಸರು ದೂರು ಸ್ವೀಕರಿಸಿದ್ದಾರೆ. ವಂಚನೆಗೆ ಒಳಗಾದ 600 ಕ್ಕೂ ಹೆಚ್ಚು ಮಂದಿ ದೂರು ದಾಖಲಿಸಿದ್ದಾರೆ. ಅಂದಾಜು ಸುಮಾರು ಹತ್ತು ಕೋಟಿ ರೂ. ಗೂ ಹೆಚ್ಚು ಹಣ ವಂಚನೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲೆಯ ಟಿ.ನರಸೀಪುರ, ಕೆ.ಆರ್.ನಗರ ದಿಂದಲೂ ವಂಚನೆಗೊಳಗಾದವರು ಆಗಮಿಸಿ ದೂರು ದಾಖಲು ಮಾಡಿದ್ದಾರೆ. ಉದಯಗಿರಿಯ ಜಬ್ಬಾರ್ ಹಾಲ್ ನಲ್ಲಿ ಉದಯಗಿರಿ ಠಾಣಾ ಪೊಲೀಸರು ಇಂದು ದೂರು ಸ್ವೀಕರಿಸಿದ್ದಾರೆ.