ಶಿವಮೊಗ್ಗದಲ್ಲಿ ಜೋರಾದ ಶೀತಗಾಳಿ: ಹಲವೆಡೆ ವರ್ಷಧಾರೆಯ ಸಿಂಚನ

Update: 2019-06-13 18:27 GMT

ಶಿವಮೊಗ್ಗ, ಜೂ. 13: ತಾಪಮಾನದಿಂದ ತತ್ತರಿಸಿದ್ದ ಶಿವಮೊಗ್ಗ ನಗರದಲ್ಲಿ ಕಳೆದ ಕೆಲ ದಿನಗಳಿಂದ ತಣ್ಣನೆಯ ವಾತಾವರಣ ಮನೆ ಮಾಡಿದ್ದು, ಶೀತಗಾಳಿ ಬೀಸುತ್ತಿದೆ. ಇದರಿಂದ ಉಷ್ಣಾಂಶದಲ್ಲಿ ಇಳಿಕೆ ಕಂಡುಬಂದಿದೆ. 

ನಗರದಲ್ಲಿ ಮೋಡ ಕವಿದ ವಾತಾವರಣವಿದೆ. ಆಗಾಗ್ಗೆ ತುಂತುರು ಮಳೆಯಾಗುತ್ತಿದೆ. ಆದರೆ ವರ್ಷಧಾರೆಯ ಅಬ್ಬರ ಇಲ್ಲವಾಗಿದೆ. ಕೆಲ ಸಮಯ ಮೋಡಗಳು ಮರೆಯಾಗಿ ಬಿಸಿಲು ಬೀಳಲಾರಂಭಿಸುತ್ತದೆ. ಸಂಜೆ ಹಾಗೂ ಬೆಳಿಗ್ಗೆಯ ವೇಳೆ ತಣ್ಣನೆ ಗಾಳಿಯ ರಭಸ ಹೆಚ್ಚಿರುವುದು ಕಂಡುಬರುತ್ತಿದೆ. ಚಳಿಯ ಅನುಭವ ಉಂಟು ಮಾಡುತ್ತಿದೆ. 

ಇನ್ನೊಂದೆಡೆ ಜಿಲ್ಲೆಯ ಹಲವೆಡೆ ವರ್ಷಧಾರೆಯ ಸಿಂಚನವಾಗಲಾರಂಭಿಸಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಮುಂಗಾರು ಮಳೆ ಆರಂಭದ ಲಕ್ಷಣಗಳು ಕಂಡುಬರುತ್ತಿರುವುದು ರೈತ ಸಮುದಾಯದಲ್ಲಿ ನಿರೀಕ್ಷೆ ಗರಿಗೆದರುವಂತೆ ಮಾಡಿದೆ. ಆದರೆ ಜೂನ್ ಎರಡನೇ ವಾರ ಪೂರ್ಣಗೊಂಡರೂ ಜಿಲ್ಲೆಯಾದ್ಯಂತ ಮುಂಗಾರು ಮಳೆ ಚುರುಕುಗೊಂಡಿಲ್ಲ. ಸರಿಯಾಗಿ ಮಳೆಯಾಗಿಲ್ಲ. ಇದರಿಂದ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವಂತಾಗಿದೆ. ಕೆಲವೆಡೆ ಇನ್ನೂ ರೈತರು ಕೃಷಿ ಭೂಮಿ ಸಜ್ಜುಗೊಳಿಸುವ ಕಾರ್ಯವನ್ನೇ ಆರಂಭಿಸಿಲ್ಲ. 

ಮಳೆ ವಿವರ: ಗುರುವಾರ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಮಳೆ ವಿವರದ ಪ್ರಕಾರ, ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 120.80 ಮಿ.ಮೀ. ವರ್ಷಧಾರೆಯಾಗಿದೆ. ಸರಾಸರಿ 17.26 ಮಿಲಿ ಮೀಟರ್ ಮಳೆಯಾಗಿದೆ. ಜೂನ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 390.67 ಮಿ.ಮೀ. ಇದ್ದು, ಇದುವರೆಗೆ ಸರಾಸರಿ 35.83 ಮಿ.ಮೀ. ಮಳೆ ದಾಖಲಾಗಿದೆ.

ಶಿವಮೊಗ್ಗದಲ್ಲಿ 2.80 ಮಿ.ಮೀ., ಭದ್ರಾವತಿ 04.80 ಮಿ.ಮೀ., ತೀರ್ಥಹಳ್ಳಿ 19.60 ಮಿ.ಮೀ., ಸಾಗರ 13.40 ಮಿ.ಮೀ., ಶಿಕಾರಿಪುರ 14.00 ಮಿ.ಮೀ., ಸೊರಬ 10.00 ಮಿ.ಮೀ., ಹಾಗೂ ಹೊಸನಗರದಲ್ಲಿ 56.20 ಮಿಮಿ. ಮಳೆಯಾಗಿದೆ. 

ಡ್ಯಾಂಗಳ ವಿವರ: ಲಿಂಗನಮಕ್ಕಿ ಡ್ಯಾಂನ ನೀರಿನ ಮಟ್ಟ 1747.65 (ಗರಿಷ್ಠ : 1819) ಅಡಿಯಿದೆ. 1947 ಕ್ಯೂಸೆಕ್ ಒಳಹರಿವಿದ್ದು, 1600 ಕ್ಯೂಸೆಕ್ ಹೊರಹರಿವಿದೆ. ಭದ್ರಾ ಡ್ಯಾಂನ ನೀರಿನ ಮಟ್ಟ 124.10 (ಗರಿಷ್ಠ ಮಟ್ಟ : 186) ಅಡಿಯಿದೆ. 83 ಕ್ಯೂಸೆಕ್ ಒಳಹರಿವಿದ್ದು, 199 ಕ್ಯೂಸೆಕ್ ಒಳಹರಿವಿದೆ. ತುಂಗಾ ಡ್ಯಾಂನ ನೀರಿನ ಮಟ್ಟ 583.37 (ಗರಿಷ್ಠ ಮಟ್ಟ : 588.24) ಒಳಹರಿವು ಹಾಗೂ ಹೊರಹರಿವು ಇಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News