ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣ: ಶಿವಮೊಗ್ಗದಲ್ಲಿ ದಸಂಸ ಪ್ರತಿಭಟನೆ

Update: 2019-06-14 12:14 GMT

ಶಿವಮೊಗ್ಗ, ಜೂ.14: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಶ್ಯಾನಡ್ರಳ್ಳಿಯ ದಲಿತ ಸಮುದಾಯದ ಪ್ರತಾಪ್ ಎಂಬ ಯುವಕನನ್ನು ಬೆತ್ತಲೆ ಮೆರವಣಿಗೆ ನಡೆಸಿ ಹಲ್ಲೆ ನಡೆಸಿದ ಅಮಾನುಷ ಘಟನೆಯನ್ನು ಖಂಡಿಸಿ ಶುಕ್ರವಾರ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. 

ಪ್ರತಾಪ್‍ರವರು 2-6-2019 ರಂದು ಐಎಎಸ್ ಪರೀಕ್ಷೆ ಬರೆಯುವ ಉದ್ದೇಶದಿಂದ ಮೈಸೂರಿನ ಮರಿಮಲ್ಲಪ್ಪ ಹಿರಿಯ ಪ್ರಾಥಮಿಕ ಶಾಲೆಗೆ ಬಂದಿದ್ದು, ತಡವಾಗಿ ಆಗಮಿಸಿದ್ದರಿಂದ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ. ಇದೇ ಬೇಸರದಿಂದ ಮೈಸೂರಿನಲ್ಲಿ ಕಾಲಕಳೆದು ವಾಪಾಸ್ ತನ್ನ ಸ್ವಗ್ರಾಮಕ್ಕೆ ಬೈಕ್‍ನಲ್ಲಿ ತೆರಳುತ್ತಿದ್ದಾಗ ರಾಘವಪುರ ಗ್ರಾಮದ ಬಳಿ ಆತನ ಬೈಕ್ ಕೆಟ್ಟು ಹೋಗಿದೆ. ಅದೇ ಸಮಯದಲ್ಲಿ ಯಾರೋ ದುಷ್ಕರ್ಮಿಗಳು ಆತನ ಹತ್ತಿರವಿದ್ದ ಹಣ ಮತ್ತೀತರೆ ವಸ್ತುಗಳನ್ನು ದೋಚಿದ್ದಾರೆ. 

ಇದರಿಂದ ಗಾಬರಿಗೊಂಡ ಪ್ರತಾಪನು ರಾತ್ರಿಯೀಡಿ ಅಲ್ಲೇ ಇದ್ದು, ಜೂ.3 ರಂದು ಬೆಳಿಗ್ಗೆ 6 ಗಂಟೆ ಸಮಯಕ್ಕೆ ವೀರನಪುರಗೇಟ್ ಹತ್ತಿರವಿರುವ ಶನಿಮಹಾತ್ಮ ದೇವಾಲಯಕ್ಕೆ ಆಶ್ರಯಕ್ಕೆ ಬಂದಿದ್ದಾನೆ. ಈ ವೇಳೆ ಅರ್ಚಕರು ಈತನನ್ನು ಗಮನಿಸಿ ಅನುಮಾನಗೊಂಡು ವಿಚಾರಿಸಿದ್ದಾರೆ. ಜೊತೆಗೆ ಮಾಹಿತಿ ಅರಿತ ಕೆಲ ಗ್ರಾಮಸ್ಥರು ಆಗಮಿಸಿದ್ದಾರೆ. ವಿಚಾರಣೆ ವೇಳೆ ಆತ ಪರಿಶಿಷ್ಟ ಜಾತಿಯವನೆಂದು ಗೊತ್ತಾಗಿದ್ದು, ಜಾತಿವಾದಿಗಳೆಲ್ಲ ಸೇರಿ ಆತನ ಬಟ್ಟೆ ಬಿಚ್ಚಿ ಅಮಾನುಷವಾಗಿ ಹಲ್ಲೆ ನಡೆಸಿ ಮೆರವಣಿಗೆ ನಡೆಸಿದ್ದಾರೆ ಎಂದು ಸಂಘಟನೆ ಆರೋಪಿಸಿದೆ. 

ದೇಶಕ್ಕೆ ಸ್ವಾತಂತ್ರ್ಯ ಬಂದು 72 ವರ್ಷ ಕಳೆದರೂ ಅಸ್ಪೃಶ್ಯ ಆಚರಣೆ ಜೀವಂತವಾಗಿರುವುದಕ್ಕೆ ಪ್ರತಾಪ್ ಪ್ರಕರಣವೇ ಸಾಕ್ಷಿ. ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಈ ರೀತಿಯ ಅಮಾನವೀಯ ಕೃತ್ಯಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಇದೀಗ ಕರ್ನಾಟಕ ರಾಜ್ಯದಲ್ಲಿ ಈ ರೀತಿಯ ಘಟನೆ ನಡೆದಿರುವುದು ನಿಜಕ್ಕೂ ದುರಂತದ ಸಂಗತಿ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈ ಪ್ರಕರಣದ ಹಾದಿ ತಪ್ಪಿಸುವ ಹುನ್ನಾರಗಳು ನಡೆಯಲಾರಂಭಿಸಿವೆ. ಪ್ರತಾಪ ಮಾನಸಿಕ ಅಸ್ವಸ್ಥ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಈ ಮೂಲಕ ಘಟನೆಯನ್ನು ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. 

ಈ ಕಾರಣದಿಂದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಉನ್ನತ ಮಟ್ಟದ ತನಿಖೆಗೊಳಪಡಿಸಬೇಕು. ದುಷ್ಕರ್ಮಿಗಳ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು. ಪ್ರತಾಪನ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಬೇಕು. ರಾಜ್ಯದಲ್ಲಿ ಮತ್ತೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಎಚ್ಚರವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. 

ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಮುಖಂಡರಾದ ಹಾಲೇಶಪ್ಪ, ರವಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News