ಮಡಿಕೇರಿ: ಶಿಕ್ಷಕಿಯ ಗುಂಡಿಟ್ಟು ಕೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

Update: 2019-06-14 13:21 GMT
ಕೊಲೆ ನಡೆದ ಸ್ಥಳ (ಒಳ ಚಿತ್ರದಲ್ಲಿ ಮೃತ ಆಶಾ ಕಾವೇರಮ್ಮ)

ಮಡಿಕೇರಿ, ಜೂ.14: ಶಿಕ್ಷಕಿಯನ್ನು ಗುಂಡು ಹೊಡೆದು ಹತ್ಯೆಗೈದ ವ್ಯಕ್ತಿಯೋರ್ವರು ಕೊನೆಗೆ ತಾನೂ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಬಾಳೆಲೆಯಲ್ಲಿ ನಡೆದಿದೆ.

ಕಳತ್ಮಾಡು ಲಯನ್ಸ್ ಪ್ರೌಢಶಾಲೆ ಶಿಕ್ಷಕಿ, ಬಾಳೆಲೆ ಗ್ರಾಮದ ದಿ. ಆದೇಂಗಡ ದಿನೇಶ್ ಚೆಂಗಪ್ಪ ಅವರ ಪತ್ನಿ ಆಶಾ ಕಾವೇರಮ್ಮ (53) ಕೊಲೆಯಾದ ಶಿಕ್ಷಕಿ. ಪೊನ್ನಂಪೇಟೆಯಲ್ಲಿ ವಾಸವಿದ್ದ ಬಲ್ಯಮುಂಡೂರು ಗ್ರಾಮದ ಮಾಚಿಮಾಡ ಜಗದೀಶ್ (67) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಶಿಕ್ಷಕಿ ಆಶಾ ಅವರ ಮನೆ ಸಮೀಪವಿರುವ ಮುಖ್ಯ ರಸ್ತೆಯ ಪೊಲೀಸ್ ಉಪಠಾಣೆ ಎದುರಿನಲ್ಲೇ ಬೆಳಗ್ಗೆ ಈ ಘಟನೆ ನಡೆದಿದೆ.

ಘಟನೆ ಸಂದರ್ಭ ಶಿಕ್ಷಕಿಯನ್ನು ರಕ್ಷಿಸಲು ಹೋದ ಬಾಳೆಲೆ ಕಾಲೇಜು ವಿದ್ಯಾರ್ಥಿ ದಿನೇಶ್ (17) ಹಾಗೂ ಪೆಮ್ಮು (45) ಅವರಿಗೂ ಗುಂಡು ತಗಲಿದ್ದು, ಅಪಾಯದಿಂದ ಪಾರಾಗಿದ್ದಾರೆ. ಇವರನ್ನು ವೀರಾಜಪೇಟೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ವಿವರ
ಶುಕ್ರವಾರ ಬೆಳಗ್ಗೆ 8.15 ಸುಮಾರಿಗೆ ಆಶಾ ಕಾವೇರಮ್ಮ ಅವರು ಮನೆಯಿಂದ ಬಂದು ಶಾಲಾ ಬಸ್ ಹತ್ತಲು ಮುಖ್ಯ ರಸ್ತೆಯಲ್ಲಿ ಕಾಯುತ್ತಿದ್ದರು. ಈ ಸಂದರ್ಭ ಆರೋಪಿ ಗುಂಡು ಹಾರಿಸಿದ್ದು, ಆಕೆ ಕೂಗಿಕೊಂಡಾಗ ರಸ್ತೆಯಲ್ಲಿ ಬರುತ್ತಿದ್ದ ವಿದ್ಯಾರ್ಥಿ ದಿನೇಶ್ ಹಾಗೂ ಸ್ಥಳೀಯ ನಿವಾಸಿ ಪೆಮ್ಮು ಅವರು ಆಕೆಯನ್ನು ಎತ್ತಲು ಪ್ರಯತ್ನಿಸಿದ್ದಾರೆ.

ಈ ಸಂದರ್ಭ ಮತ್ತೊಂದು ಗುಂಡು ಹಾರಿದ್ದು, ಗುಂಡು ದಿನೇಶ್ ಹಾಗೂ ಪೆಮ್ಮು ಅವರ ಕೈ ಹಾಗೂ ತೊಡೆಯ ಭಾಗಕ್ಕೆ ತಗುಲಿದೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಮೀಪದ ತೋಟದಲ್ಲಿ ಕೆಲಸ ಮಾಡುತ್ತಿದ್ದವರು ಬಂದು ಕುಸಿದು ಬಿದ್ದಿದ್ದ ಆಶಾ ಅವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದಾಗ ಅವರು ಮೃತಪಟ್ಟಿದ್ದಾರೆ. 

ಕೃತ್ಯ ನಡೆದ 25 ಮೀಟರ್ ದೂರದ ತೋಟದಲ್ಲಿ ಹಂತಕ ಜಗದೀಶ್ ಅವರ ಮೃತದೇಹ ಪತ್ತೆಯಾಗಿದ್ದು, ಕೋವಿಯಿಂದ ಗುಂಡು ಹೊಡೆದುಕೊಂಡಿರುವುದು ಕಂಡು ಬಂದಿದೆ. ಸಾಲ ಪಡೆದುಕೊಂಡ ವಿಚಾರದಲ್ಲಿ ಜಗದೀಶ್ ಅವರು ಆಶಾ ಅವರಿಗೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪವಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಗದೀಶ್ ಜೈಲುವಾಸ ಕೂಡ ಅನುಭವಿಸಿದ್ದರು. ಇದೇ ಸೇಡು ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಪನ್ನೇಕರ್ ಭೇಟಿ ನೀಡಿ ಪರಿಶೀಲಿಸಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News