ಕಾಂಗ್ರೆಸ್ ಸೇರಿದ ನೂತನ ಸಚಿವ ಆರ್.ಶಂಕರ್

Update: 2019-06-14 13:39 GMT

ಬೆಂಗಳೂರು, ಜೂ.14: ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯ (ಕೆಪಿಜೆಪಿ) ಏಕೈಕ ಶಾಸಕ ಆರ್.ಶಂಕರ್ ತಮ್ಮ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಿದ್ದಾರೆ.

ಮೈತ್ರಿ ಸರಕಾರಕ್ಕೆ ಬೆಂಬಲ ಘೋಷಿಸಿದ್ದ ಪಕ್ಷೇತರ ಶಾಸಕ ಆರ್.ಶಂಕರ್‌ನ್ನು ಮೊದಲ ಸಂಪುಟ ವಿಸ್ತರಣೆಯಲ್ಲಿಯೆ ಸಚಿವರನ್ನಾಗಿ ಮಾಡಿ, ಅರಣ್ಯ ಖಾತೆಯನ್ನು ನೀಡಲಾಗಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಳೆದ ಡಿಸೆಂಬರ್‌ನಲ್ಲಿ ನಡೆದ ಎರಡನೆ ಸಂಪುಟ ವಿಸ್ತರಣೆಯಲ್ಲಿ ಅವರನ್ನು ಸಚಿವ ಸ್ಥಾನದಿಂದ ಕೈಬಿಡಲಾಗಿತ್ತು.

ಆ ಬಳಿಕ ಆರ್.ಶಂಕರ್ ಬಹಿರಂಗವಾಗಿಯೆ ಮೈತ್ರಿ ಸರಕಾರದ ವಿರುದ್ಧ ಬಂಡಾಯ ಎದ್ದಿದ್ದರು. ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಎಚ್ಚರಿಕೆಯನ್ನು ನೀಡಿದ್ದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮನವೊಲಿಸಿ, ಪುನಃ ಸ್ಥಾನ ನೀಡಲಾಗುವುದು ಎಂದು ಭರವಸೆ ನೀಡಿ ಸಾಂತ್ವನ ಮಾಡಿದ್ದರು. ಈಗ 3ನೇ ಬಾರಿ ಮೈತ್ರಿ ಸರಕಾರ ಸಂಪುಟ ವಿಸ್ತರಣೆಗೊಂಡಿದ್ದು, ಪ್ರಮಾಣ ವಚನ ಸ್ವೀಕರಿಸುವ ಮುನ್ನ ಆರ್.ಶಂಕರ್ ಸಿದ್ದರಾಮಯ್ಯರನ್ನು ಭೇಟಿ ಮಾಡಿ ತಮ್ಮ ಪಕ್ಷವನ್ನು ಕಾಂಗ್ರೆಸ್ ವಿಲೀನಗೊಳಿಸಿದ್ದಾರೆ. ಈ ಸಂಬಂಧ ಪತ್ರವೊಂದನ್ನು ಸಿದ್ದರಾಮಯ್ಯಗೆ ನೀಡಿದ್ದಾರೆ. ಶಂಕರ್‌ರನ್ನು ಪಕ್ಷಕ್ಕೆ ಬರಮಾಡಿಕೊಂಡ ಸಿದ್ದರಾಮಯ್ಯ ಶುಭ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News