ವಿಸ್ತರಣೆ ನೆಪದಲ್ಲಿ ಸರಕಾರ ಉಳಿಸಿಕೊಳ್ಳಲು ಕಸರತ್ತು: ಕೇಂದ್ರ ಸಚಿವ ಸದಾನಂದ ಗೌಡ
ಬೆಂಗಳೂರು, ಜೂ. 14: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಜನ ಸೇವೆ ಮಾಡುವುದನ್ನು ಬಿಟ್ಟು ಸಂಪುಟ ವಿಸ್ತರಣೆ ಹೆಸರಿನಲ್ಲಿ ಸರಕಾರ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದಗೌಡ ಟೀಕಿಸಿದ್ದಾರೆ.
ಶುಕ್ರವಾರ ವಿಜಯನಗರದಲ್ಲಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಸರಕಾರ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವಾಗಬೇಕು. ಅಭಿವೃದ್ಧಿ ಕಾರ್ಯಗಳತ್ತ ಆಸ್ಥೆ ವಹಿಸಬೇಕು. ಆದರೆ, ಆ ಕೆಲಸಗಳನ್ನು ಬಿಟ್ಟು ಗೊಂದಲದಲ್ಲಿ ಮುಳುಗಿದೆ ಎಂದು ದೂರಿದರು.
ಅಲ್ಪಸಂಖ್ಯಾತರ ಸಮುದಾಯದ ಬಿ.ಎಂ.ಫಾರೂಕ್, ಎಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಇದೀಗ ಪಕ್ಷೇತರ ಶಾಸಕರಿಬ್ಬರಿಗೆ ಸ್ಥಾನ ನೀಡಲಾಗಿದೆ. ಆ ಮೂಲಕ ಸರಕಾರ ಭದ್ರ ಮಾಡಿಕೊಳ್ಳಲು ಅವರನ್ನು ಮಂತ್ರಿ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
ನಾವು ಯಾವುದೇ ಕಾರಣಕ್ಕೂ ಆಪರೇಷನ್ ಕಮಲಕ್ಕೆ ಕೈ ಹಾಕುವುದಿಲ್ಲ. ಬಿಜೆಪಿ ಯಾರನ್ನು ಸಂಪರ್ಕಿಸಿಲ್ಲ. ಮೈತ್ರಿ ಸರಕಾರವನ್ನು ಉಳಿಸಿಕೊಳ್ಳಲು ಅವರೇ ಇಂತಹವುಗಳನ್ನು ಸೃಷ್ಟಿಸುತ್ತಾರೆ. ಸಚಿವ ಸ್ಥಾನ ನೀಡಿ ಬೇರೆ ಪಕ್ಷಕ್ಕೆ ಹೋಗದೆ ಇರುವಂತೆ ಮಾಡಲು ಈ ತಂತ್ರ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.