×
Ad

ಸಮೂಹ ಕೃಷಿಗಾಗಿ ಕಾಯ್ದೆ ತಿದ್ದುಪಡಿ: ಕೃಷಿ ಸಚಿವ ಶಿವಶಂಕರರೆಡ್ಡಿ

Update: 2019-06-14 20:06 IST

ಬೆಂಗಳೂರು, ಜೂ.14: ರಾಜ್ಯ ವ್ಯಾಪ್ತಿಯಲ್ಲಿ ಸಮೂಹ ಕೃಷಿ (ಕಾಂಟ್ರಾಕ್ಟ್ ಫಾರ್ಮಿಂಗ್) ಕೈಗೊಳ್ಳುವ ರೈತರನ್ನು ಪ್ರೋತ್ಸಾಹಿಸಲು ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಅಭಾವ ಹಾಗೂ ರೈತರು ಒಟ್ಟಿಗೆ ಆದಾಯ ಹೆಚ್ಚಳ, ಇಳುವರಿ ಹೆಚ್ಚಳ ಸಹಿತಿ ನಾನಾ ಲಾಭಕ್ಕೆ ಇಂತಹ ಕ್ರಮಕ್ಕೆ ಮುಂದಾಗಿದ್ದು, ಈ ಸಂಬಂಧ ಸಂಪುಟ ಉಪ ಸಮಿತಿಯಲ್ಲಿ ಚರ್ಚೆಯೂ ನಡೆದಿದೆ. ಶೀಘ್ರದಲ್ಲಿಯೇ ಸಂಪುಟದ ಮುಂದೆ ತಂದು, ನಂತರ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲಾಗುವುದೆಂದು ಮಾಹಿತಿ ನೀಡಿದರು.

ಮುಂಗಾರು ಹಂಗಾಮಿಗೆ ರೈತರಿಗೆ ಅಗತ್ಯವಿರುವ ಗುಣಮಟ್ಟದ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಮುಂಗಾರು ಹಂಗಾಮಿಗೆ 6.29 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳಿಗೆ ಬೇಡಿಕೆಯಿದ್ದು, ನಮ್ಮಲ್ಲಿ 10.82 ಲಕ್ಷ ಕ್ವಿಂಟಾಲ್ ಲಭ್ಯತೆ ಇದೆ ಎಂದರು.

ಇದುವರೆಗೆ 36,065 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿದ್ದು, 10.46 ಲಕ್ಷ ಕ್ವಿಂಟಾಲ್ ದಾಸ್ತಾನಿದೆ. ಅದೇ ರೀತಿ, ಈ ಹಂಗಾಮಿಗೆ 22.45 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ರಸಗೊಬ್ಬರಕ್ಕೆ ಬೇಡಿಕೆ ಇದ್ದು, ಈವರೆಗೆ 6.38 ಲಕ್ಷ ಮೆಟ್ರಿಕ್ ಟನ್ ಪೂರೈಕೆಯಾಗಿದೆ. ವಿವಿಧ ಜಿಲ್ಲೆಗಳಲ್ಲಿ 7.94 ಲಕ್ಷ ಮೆಟ್ರಿಕ್ ಟನ್ ದಾಸ್ತಾನಿದ್ದು, ಈ ವಿಚಾರದಲ್ಲೂ ಯಾವುದೇ ಕೊರತೆ ಉಂಟಾಗುವುದಿಲ್ಲ ಎಂದು ವಿವರಿಸಿದರು.

ರಾಜ್ಯದಲ್ಲಿ ವಾರ್ಷಿಕ ವಾಡಿಕೆ ಮಳೆ 11.56 ಮಿ.ಮೀ. ಆಗಿದ್ದು, ಗುರುವಾರ 196.9 ಮಿ.ಮೀಟರ್ ಮಳೆ ಆಗಬೇಕಾಗಿತ್ತು. ಆದರೆ, ಈವರೆಗೆ 129.90 ಮಿ.ಮೀ. ಮಳೆಯಾಗಿದೆ. ಈ ವರ್ಷ ವಾಡಿಕೆ ಮಳೆಯಲ್ಲಿ ಶೇ.34 ರಷ್ಟು ಕೊರತೆ ಉಂಟಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News