‘ಜಿಂದಾಲ್ ಗೆ ಭೂಮಿ’ ತೀರ್ಮಾನ ಪುನರ್ ಪರಿಶೀಲನೆ: ಸಚಿವ ಸಂಪುಟ ಸಮಿತಿ ರಚನೆಗೆ ನಿರ್ಧಾರ- ಕೃಷ್ಣಭೈರೇಗೌಡ

Update: 2019-06-14 16:27 GMT

ಬೆಂಗಳೂರು, ಜೂ.14: ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ 3667.31 ಎಕರೆ ಭೂಮಿಯನ್ನು ಜೆ.ಎಸ್.ಡಬ್ಬೂ ಸ್ಟೀಲ್ ಲಿಮಿಟೆಡ್(ಜಿಂದಾಲ್) ಸಂಸ್ಥೆಗೆ ಪರಭಾರೆ ಮಾಡುವ ಸಂಬಂಧ ಕಳೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿದ್ದ ತೀರ್ಮಾನವನ್ನು ಪುನರ್ ಪರಿಶೀಲಿಸಲು ಸಂಪುಟ ಉಪ ಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಂದಾಲ್ ಸಂಸ್ಥೆಗೆ ಭೂಮಿ ನೀಡುವ ವಿಚಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಪಸ್ವರ ಕೇಳಿ ಬಂದ ಹಿನ್ನೆಲೆಯಲ್ಲಿ ಸಂಪುಟ ಉಪ ಸಮಿತಿ ರಚಿಸಲಾಗುವುದು. ಸಮಿತಿ ವರದಿ ನೀಡಿದ ಬಳಿಕ, ಸರಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದರು.

ಸಚಿವ ಸಂಪುಟ ಉಪ ಸಮಿತಿ ಯಾರ ನೇತೃತ್ವದಲ್ಲಿ ರಚನೆಯಾಗಬೇಕು, ಸಮಿತಿಯಲ್ಲಿ ಯಾರೆಲ್ಲ ಸದಸ್ಯರು ಇರಬೇಕು ಎಂಬುದರ ಕುರಿತು ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿಗೆ ನೀಡಲಾಗಿದೆ ಎಂದು ಅವರು ಹೇಳಿದರು.

ಗ್ರಾಮೀಣ ಸುಮಾರ್ಗ ಯೋಜನೆ: ರಾಜ್ಯದ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 20 ಸಾವಿರ ಕಿ.ಮೀ.ಡಾಂಬರು ಮೇಲ್ವೈಯುಳ್ಳ ರಸ್ತೆಗಳನ್ನು ಮುಂದಿನ ಐದು ವರ್ಷಗಳಲ್ಲಿ 7182.50 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಬಲಪಡಿಸುವ, ನವೀಕರಣಗೊಳಿಸುವ, ನಿರ್ವಹಣೆ ಮಾಡುವ ‘ಮುಖ್ಯಮಂತ್ರಿ ಗ್ರಾಮೀಣ ಸುಮಾರ್ಗ ಯೋಜನೆ’ಯನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ 56,362 ಕಿ.ಮೀ.ಗ್ರಾಮೀಣ ರಸ್ತೆಯಿದೆ. ಈ ಪೈಕಿ 24,246 ಕಿ.ಮೀ.ಡಾಂಬರು ರಸ್ತೆಯಿದೆ. 20 ಸಾವಿರ ಕಿ.ಮೀ.ರಸ್ತೆ ಹಾಳಾಗಿದ್ದರೆ, 4 ಸಾವಿರ ಕಿ.ಮೀ.ರಸ್ತೆ ಸಂಪೂರ್ಣ ಹಾಳಾಗಿದೆ. ಈ ರಸ್ತೆಗಳ ದುರಸ್ಥಿಗಾಗಿ ತಕ್ಷಣಕ್ಕೆ 600 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಹಂತ-3, ಘೋಷಣೆಯಾಗಿ ಸಾಕಷ್ಟು ಸಮಯ ಕಳೆದಿದೆ. ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಈ ಯೋಜನೆಯಡಿ 1500 ಕೋಟಿ ರೂ.ಹಣ ಬರಬೇಕು. ಆದರೆ, ಇದುವರೆಗೆ ಬಂದಿಲ್ಲ. ಹಣ ಬಂದರೆ ಮುಖ್ಯಮಂತ್ರಿ ಗ್ರಾಮೀಣ ಸುಮಾರ್ಗ ಯೋಜನೆಗೆ ಬಳಸಿಕೊಳ್ಳಬಹುದು ಎಂದು ಕೃಷ್ಣಭೈರೇಗೌಡ ಹೇಳಿದರು.

ರಾಜ್ಯ ಅರಣ್ಯ ಇಲಾಖೆ(ಸೇವೆಗಳು)(ನೇಮಕಾತಿ)(ತಿದ್ದುಪಡಿ)ನಿಯಮಗಳು, 2017ಕ್ಕೆ ಅನುಮೋದನೆ ನೀಡಲು ನಿರ್ಧರಿಸಲಾಗಿದ್ದು, ಅರಣ್ಯ ರಕ್ಷಕ ಸೇರಿದಂತೆ ಇನ್ನಿತರ ಹುದ್ದೆಗಳಲ್ಲಿ ಅರಣ್ಯ ವಾಸಿಗಳಿಗೆ ಶೇ.30ರಷ್ಟು ಮೀಸಲಾತಿ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.

ಲ್ಯಾಪ್‌ಟಾಪ್: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪದವಿ ತರಗತಿಗಳಿಗೆ ಪ್ರವೇಶ ಪಡೆಯುವ ಹಾಗೂ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲು ಸಚಿವ ಸಂಪುಟ ತೀರ್ಮಾನಿಸಿದೆ. 1.09 ಲಕ್ಷ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಸಿಗಲಿದ್ದು, 311 ಕೋಟಿ ರೂ.ವೆಚ್ಚವಾಗಲಿದೆ ಎಂದು ಕೃಷ್ಣಭೈರೇಗೌಡ ಹೇಳಿದರು.

ರಾಮನಗರದ ರಾಜೀವ್‌ಗಾಂಧಿ ವೈದ್ಯಕೀಯ ವಿದ್ಯಾಲಯದ ಆಡಳಿತ ಕಟ್ಟಡದ ಕಾಮಗಾರಿ ಹೊರತುಪಡಿಸಿ, ಉಳಿದ ಕಟ್ಟಡ ನಿರ್ಮಾಣಕ್ಕೆ 483 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿಗೆ ಟೆಂಡರ್ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದರು.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ, ಗೋಸಬಾಳ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜಮೀನುಗಳಿಗೆ ‘ಕಲ್ಲಮರಡಿ’ ಏತ ನೀರಾವರಿ ಯೋಜನೆ ಮೂಲಕ ನೀರಾವರಿ ಸೌಲಭ್ಯ ಒದಗಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಕೃಷ್ಣಭೈರೇಗೌಡ ಹೇಳಿದರು.

ರಾಮನಗರ ಜಿಲ್ಲೆಯ ಕನಕಪುರ ಪಟ್ಟಣದಲ್ಲಿ 100 ಹಾಸಿಗೆ ಸಾಮರ್ಥ್ಯದ ಸರಕಾರಿ ಹೆರಿಗೆ ಆಸ್ಪತ್ರೆಯನ್ನು ಇನ್ಫೋಸಿಸ್ ಸಂಸ್ಥೆಯೊಂದಿಗೆ ಸಿಎಸ್‌ಆರ್ ಅಡಿ ನಿರ್ಮಿಸಲು ಅನುಮೋದನೆ ನೀಡಲಾಗಿದ್ದು, ಇದಕ್ಕಾಗಿ 26 ಕೋಟಿ ರೂ.ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಕೇಂದ್ರ ಸರಕಾರದ ನವೋದ್ಯಮ ನೀತಿಯ ಅನುಸಾರವೇ ನಿಯಮಾವಳಿಗಳನ್ನು ಒಳಗೊಂಡ ‘ಕರ್ನಾಟಕ ಸ್ಟಾರ್ಟ್ ಅಪ್ ನೀತಿ 2015-2020’ಕ್ಕೆ ತಿದ್ದುಪಡಿ ಮಾಡಲು ತೀರ್ಮಾನಿಸಲಾಗಿದೆ ಎಂದು ಕೃಷ್ಣಭೈರೇಗೌಡ ಹೇಳಿದರು.

ತುಮಕೂರು ಜಿಲ್ಲೆಯ ವ್ಯಾಪ್ತಿಯಲ್ಲಿರುವ 72 ಕಿ.ಮೀ.ಹೇಮಾವತಿ ನಾಲೆ ಆಧುನೀಕರಣಕ್ಕೆ ತೀರ್ಮಾನಿಸಲಾಗಿದೆ. ಅಲ್ಲದೇ, ಹೇಮಾವತಿ ಕಾಲುವೆಯಿಂದ ಕುಣಿಗಲ್‌ಗೆ 35 ಕಿ.ಮೀ.ಉದ್ದ ಪೈಪ್‌ಲೈನ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಯನ್ನು ಆರಂಭಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ 34,558 ಮುಜರಾಯಿ ದೇವಸ್ಥಾನಗಳಿವೆ. ಅವುಗಳ ಆದಾಯಕ್ಕೆ ಅನುಗುಣವಾಗಿ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ವೇತನ ಪರಿಷ್ಕರಣೆ ಮಾಡಲು ಒಪ್ಪಿಗೆ ನೀಡಲಾಗಿದ್ದು, ಸರಕಾರಿ ಕೆಲಸಕ್ಕೆ ಸಮನಾದ ವೇತನ ಸಿಗಬೇಕು. ಎ ಗ್ರೂಪ್ ದೇವಸ್ಥಾನಗಳಲ್ಲಿ 11,600-24,600 ರೂ., ಬಿ ಗ್ರೂಪ್ ದೇವಸ್ಥಾನಗಳಲ್ಲಿ 7275-17250 ರೂ.ಗಳಿಗೆ ವೇತನ ನೀಡಲಾಗುತ್ತಿದೆ. ವೇತನ ಪರಿಷ್ಕರಣೆ ಸಿ ಗ್ರೂಪ್ ನೌಕರರಿಗೆ ಅನ್ವಯವಾಗಲಿದ್ದು, 3500 ಮಂದಿಗೆ ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು.

ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ ಮಾಡುವ ಕುರಿತು ಉಂಟಾಗಿರುವ ಗೊಂದಲಗಳ ಕುರಿತು ಪರಾಮರ್ಶಿಸಲು ರಚಿಸುವ ಸಚಿವ ಸಂಪುಟ ಉಪ ಸಮಿತಿಗೆ ತನ್ನನ್ನು ಸೇರಿಸದಂತೆ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಜಿಂದಾಲ್ ಸಂಸ್ಥೆಗೆ ಭೂಮಿ ನೀಡುತ್ತಿರುವ ವಿಚಾರವನ್ನು ಪ್ರತಿಪಕ್ಷ ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಆದುದರಿಂದ, ನೇರವಾಗಿ ಭೂಮಿ ನೀಡುವ ಬದಲು ಸಚಿವ ಸಂಪುಟ ಉಪ ಸಮಿತಿ ರಚಿಸಿ, ಪರಾಮರ್ಶೆ ನಡೆಸೋಣ. ಆನಂತರ, ಸಮಿತಿ ನೀಡುವ ವರದಿಯನ್ವಯ ಮುಂದುವರೆಯೋಣ ಎಂದು ಸಚಿವರು ನೀಡಿದ ಸಲಹೆಗೆ ಮುಖ್ಯಮಂತ್ರಿ ಸಹಮತ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News