ಐಎಂಎ ಬಹುಕೋಟಿ ವಂಚನೆ ಪ್ರಕರಣ: ಸಿಬಿಐ ತನಿಖೆಗೆ ನಿರ್ದೇಶಿಸಲು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ

Update: 2019-06-14 18:18 GMT

ಬೆಂಗಳೂರು, ಜೂ.14: ಐ ಮಾನಿಟರಿ ಅಡ್ವೈಸರಿ(ಐಎಂಎ) ಸಮೂಹ ಸಂಸ್ಥೆಗಳ ಬಹುಕೋಟಿ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಕೋರಿ ಚಿತ್ರದುರ್ಗದ ಮೂಲದ ಹೂಡಿಕೆದಾರ ಮುಹಮ್ಮದ್ ಸಿರಾಜುದ್ದೀನ್ ಎಂಬುವವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಕುರಿತು ತುರ್ತು ವಿಚಾರಣೆ ನಡೆಸಲು ಅರ್ಜಿದಾರರ ಪರ ಹಿರಿಯ ವಕೀಲ ಜಿ.ಆರ್.ಮೋಹನ್ ಅವರು ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ನ್ಯಾಯಪೀಠಕ್ಕೆ ಮೊಮೊ ಸಲ್ಲಿಸಿದರು. ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.

ಐಎಂಎ ಸಂಸ್ಥೆಯಲ್ಲಿ 10 ಲಕ್ಷ ರೂ.ಹೂಡಿಕೆ ಮಾಡಿದ್ದೇನೆ. ಆದರೆ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ಮನ್ಸೂರ್ ಖಾನ್ ಅವರನ್ನು ಪೊಲೀಸರು ಈವರೆಗೆ ಪತ್ತೆ ಹಚ್ಚಿಲ್ಲ. ಮನ್ಸೂರ್ ಖಾನ್ ಸಚಿವರು, ಶಾಸಕರು, ಪ್ರಭಾವಿ ರಾಜಕಾರಣಿಗಳಿಗೆ ಆಪ್ತನಾಗಿದ್ದು, ಪೊಲೀಸರು ಪಾರದರ್ಶಕ ತನಿಖೆ ನಡೆಸುತ್ತಾರೆಯೆಂಬ ನಂಬಿಕೆ ನನಗಿಲ್ಲ. ಹೀಗಾಗಿ, ವಂಚನೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸಬೇಕೆಂದು ಅರ್ಜಿದಾರ ಮುಹಮ್ಮದ್ ಸಿರಾಜುದ್ದೀನ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಐಎಂಎ ಕುರಿತು ಬೆಂಗಳೂರು ಉತ್ತರ ಎಸಿ ಸಾರ್ವಜನಿಕ ನೋಟಿಸ್ ಜಾರಿಗೊಳಿಸಿದ್ದಾರೆ. ಅದರಂತೆ ಮನ್ಸೂರ್ ಖಾನ್ ವಿರುದ್ಧ ಕೈಗೊಂಡಿರುವ ತನಿಖೆಯ ಸಮಗ್ರ ದಾಖಲೆಗಳು ಮತ್ತು ಕಂಪೆನಿಯ ನಿರ್ದೇಶಕರಿಗೆ ಸಂಬಂಧಪಟ್ಟ ವಿವರಗಳನ್ನು ನ್ಯಾಯಪೀಠಕ್ಕೆ ಸಲ್ಲಿಸುವಂತೆ ಉಪವಿಭಾಗಧಿಕಾರಿಗೆ ನಿರ್ದೇಶನ ನೀಡುವಂತೆ ಸಿರಾಜುದ್ದೀನ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News