ಎಲ್‍ಕೆಜಿ ವಿದ್ಯಾರ್ಥಿಯ ಕೈಕಾಲು ಕಟ್ಟಿ ಹಾಕಿದ ಶಿಕ್ಷಕಿ !
Update: 2019-06-14 22:20 IST
ಶಿವಮೊಗ್ಗ, ಜೂ. 14: ಖಾಸಗಿ ಶಾಲೆಯ ಶಿಕ್ಷಕಿಯೋರ್ವರು ಪ್ಲಾಸ್ಟಿಕ್ ದಾರದಲ್ಲಿ ಎಲ್.ಕೆ.ಜಿ. ವಿದ್ಯಾರ್ಥಿಯ ಕೈಕಾಲು ಕಟ್ಟಿ ಹಾಕಿದ ಘಟನೆ ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಲಷ್ಕರ್ ಮೊಹಲ್ಲಾದ ಖಾಸಗಿ ಉರ್ದು ಶಾಲೆಯೊಂದರಲ್ಲಿ ನಡೆದಿದೆ.
ಇದೀಗ ವಿದ್ಯಾರ್ಥಿಯ ಪೋಷಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಮತ್ತೊಂದೆಡೆ ಶಾಲೆಯವರು ಘಟನೆಯ ಬಗ್ಗೆ ಕ್ಷಮೆಯಾಚಿಸಿದ್ದಾರೆನ್ನಲಾಗಿದೆ. ಈ ಕಾರಣದಿಂದ ಇಲ್ಲಿಯವರೆಗೂ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿಲ್ಲವೆಂದು ಮೂಲಗಳು ಮಾಹಿತಿ ನೀಡಿವೆ.
ಘಟನೆ ಹಿನ್ನೆಲೆ: ಗುರುವಾರ ಈ ಘಟನೆ ನಡೆದಿದೆ. 4.5 ವರ್ಷದ ವಿದ್ಯಾರ್ಥಿ ಗಲಾಟೆ ಮಾಡಿದ ಕಾರಣಕ್ಕೆ ಶಿಕ್ಷಕಿಯು ಪ್ಲಾಸ್ಟಿಕ್ ದಾರದಿಂದ ವಿದ್ಯಾರ್ಥಿಯ ಕೈಕಾಲುಗಳನ್ನು ಕಟ್ಟಿದ್ದರು. ಈ ಕುರಿತಂತೆ ಮಾಹಿತಿ ಅರಿತ ಪೋಷಕರು ಶುಕ್ರವಾರ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಶಾಲೆಯ ಆಡಳಿತ ಮಂಡಳಿಯವರು ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.