ಅಂಬೇಡ್ಕರ್ ನಾಮಫಲಕ ವಿಚಾರಕ್ಕೆ ವಾಗ್ವಾದ: ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು

Update: 2019-06-14 16:52 GMT

ಯಾದಗಿರಿ, ಜೂ. 14: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಇರುವ ದಲಿತ ಸಂಘಟನೆಯ ನಾಮಫಲಕ ಅಳವಡಿಸುವ ವಿಚಾರ ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ಕುರುಬ ಮತ್ತು ದಲಿತ ಸಂಘಟನೆಗಳ ಮಧ್ಯೆ ಕಿತ್ತಾಟಕ್ಕೆ ಕಾರಣವಾಗಿದೆ.

ಜೂ.9ರಂದು ದಲಿತ ಸಂಘಟನೆಗಳ ಕಾರ್ಯಕರ್ತರು ಏಕಾಏಕಿ ವಡಗೇರಾ ಪಟ್ಟಣದ ಹಳೆ ಪೊಲೀಸ್ ಠಾಣೆ ಆವರಣದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಭಾವಚಿತ್ರ ಇರುವ ಅಂಬೇಡ್ಕರ್ ನಗರ ನಾಮಫಲಕವನ್ನು ಅಳವಡಿಸಿದ್ದು, ಇದಕ್ಕೆ ಕುರುಬ ಸಮುದಾಯದ ಕೆಲ ಯುವಕರು ಆಕ್ಷೇಪಿಸಿದ್ದಾರೆ. ಇದರಿಂದ ಎರಡು ಸಮುದಾಯಗಳ ಮಧ್ಯೆ ವಾಗ್ವಾದಕ್ಕೂ ಕಾರಣವಾಗಿದೆ. ಆ ಹಿನ್ನೆಲೆಯಲ್ಲಿ ಮಧ್ಯೆ ಪ್ರವೇಶಿಸಿದ ಪೊಲೀಸರು, ಸರಕಾರಿ ಜಾಗದಲ್ಲಿ ಅನುಮತಿ ಇಲ್ಲದೆ ನಾಮಫಲಕ ಅಳವಡಿಸುವುದು ಸರಿಯಲ್ಲ. ಹೀಗಾಗಿ ತೆರವುಗೊಳಿಸಲು ಸೂಚಿಸಿದ್ದಾರೆ. ಇದಕ್ಕೆ ದಲಿತ ಸಮುದಾಯದ ಯುವಕರು ಒಪ್ಪಿಲ್ಲ.

ಈ ನಡುವೆ ಸ್ಥಳೀಯ ಪಿಡಿಓ ಸರಕಾರಿ ಜಾಗದಲ್ಲಿ ನಾಮಫಲಕ ಅಳವಡಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಅನುಮತಿ ಇಲ್ಲದೆ ನಾಮಫಲಕ ಅಳವಡಿಸಿದ್ದಾರೆಂದು ಪೊಲೀಸರು ಫಲಕ ತೆರವುಗೊಳಿಸಿದ್ದರಿಂದ ಉದ್ವಿಗ್ನಗೊಂಡ ದಲಿತ ಯುವಕರು, ಧರಣಿ ನಡೆಸಿ ನಾಮಫಲಕ ಮರು ಸ್ಥಾಪಿಸಲು ಆಗ್ರಹಿಸಿದ್ದಾರೆ ಎನ್ನಲಾಗಿದೆ. 

ಇದೇ ವಿಚಾರ ಕುರುಬ ಮತ್ತು ದಲಿತ ಸಮುದಾಯಗಳ ಮಧ್ಯೆ ಪ್ರತಿಷ್ಠೆಗೆ ಕಾರಣವಾಗಿದ್ದು, ನಾಮಫಲಕ ಸ್ಥಾಪಿಸಲು ಪರ-ವಿರೋಧದಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕೆ ಯಾದಗಿರಿ ಎಸ್ಪಿ, ತಹಶಿಲ್ದಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಎರಡು ಸಮುದಾಯಗಳ ಮನವೋಲಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ವಡಗೇರಾ ಪಟ್ಟಣದಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಈ ಸಂಬಂಧ ವಡಗೇರಾ ಪಟ್ಟಣ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

‘ವಡಗೇರಾ ಪಟ್ಟಣದ ಅತ್ಯಂತ ಇಕ್ಕಟ್ಟಾಗಿರುವ ಕುರುಬರ ಓಣಿಯಲ್ಲಿನ ಹಳೆ ಪೊಲೀಸ್ ಠಾಣಾ ಆವರಣದಲ್ಲಿ ದಲಿತ ಸಮುದಾಯದ ಕೆಲ ಯುವಕರು ಅನುಮತಿ ಇಲ್ಲದೆ ಏಕಾಏಕಿ ನಾಮಫಲಕ ಅಳವಡಿಸಿದ್ದರಿಂದ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು. ಎಸ್ಪಿ ಮತ್ತು ಅಧಿಕಾರಿಗಳ ಮಧ್ಯೆ ಪ್ರವೇಶದಿಂದ ಪರಿಸ್ಥಿತಿ ತಿಳಿಗೊಳಿಸಲಾಗಿದೆ’

-ವಡಗೇರಾ, ಪಿಎಸ್ಸೈ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News