ದಲಿತರನ್ನು ಪಕ್ಷಕ್ಕೆ ಕರೆತರಲು ಅಭಿಯಾನ: ಜೆಡಿಎಸ್ ಎಸ್ಸಿ, ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಎ.ಆನಂದ್

Update: 2019-06-14 17:01 GMT

ಬೆಂಗಳೂರು, ಜೂ.14: ಬೂತ್ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಶೋಷಿತ ಸಮುದಾಯಗಳನ್ನು ಜೆಡಿಎಸ್‌ಗೆ ಕರೆ ತರುವ ಅಭಿಯಾನಕ್ಕೆ ಆದ್ಯತೆ ನೀಡಲಾಗುವುದು ಎಂದು ಜೆಡಿಎಸ್ ಎಸ್ಸಿ ಮತ್ತು ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಎ.ಆನಂದ್ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಜೆಡಿಎಸ್‌ನ ಎಸ್ಸಿ ಮತ್ತು ಎಸ್ಟಿ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ನಲ್ಲಿ ಸದಸ್ಯತ್ವ ನೋಂದಣಿಗೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ದಲಿತ ಸಮುದಾಯವನ್ನು ಪಕ್ಷಕ್ಕೆ ಕರೆತರುವಂತಹ ಅಭಿಯಾನ ಆರಂಭಿಸಲಾಗಿದೆ ಎಂದು ತಿಳಿಸಿದರು.

ಮೈತ್ರಿ ಸರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಕ್ಕೆ ಹಲವಾರು ಯೋಜನೆಗಳನ್ನು ನೀಡಿದೆ. ಇವುಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು. ಯೋಜನೆಗಳ ಅನುಷ್ಠಾನಕ್ಕೆ ವೇಗ ನೀಡುವ ಜತೆಗೆ ಜನ ಸಾಮಾನ್ಯರಿಗೆ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಅವರು ಹೇಳಿದರು.

ಜೆಡಿಎಸ್ ಪಕ್ಷದ ವಿವಿಧ ಮಾತೃ ಘಟಕಗಳಿಗೆ ನೇಮಕ ಮಾಡುವಾಗಲೂ ದಲಿತ ಸಮುದಾಯಕ್ಕೆ ಅಗತ್ಯ ಪ್ರಾತಿನಿಧ್ಯೆ ಕಲ್ಪಿಸುವಂತೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿಗೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಎಲ್ಲಾ ಜಿಲ್ಲೆಗಳ ಎಸ್ಸಿ ಮತ್ತು ಎಸ್ಟಿ ವಿಭಾಗದ ಅಧ್ಯಕ್ಷರು, ಪದಾಧಿಕಾರಿಗಳು, ಶಾಸಕರಾದ ನಿಸರ್ಗ ನಾರಾಯಣ ಸ್ವಾಮಿ, ದೇವಾನಂದ ಚೌಹಾಣ್, ಶ್ರೀನಿವಾಸ ಮೂರ್ತಿ, ಪಕ್ಷದ ಮುಖಂಡರಾದ ಅಶ್ವಿನ್‌ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News