ಕೆಎಸ್ಸಾರ್ಟಿಸಿ: ಜೂ.19 ರಿಂದ ವಿದ್ಯಾರ್ಥಿ ಬಸ್‌ಪಾಸ್ ವಿತರಣೆ

Update: 2019-06-14 17:15 GMT

ಬೆಂಗಳೂರು, ಜೂ.14: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು(ಕೆಎಸ್ಸಾರ್ಟಿಸಿ) 2019-20ನೆ ಸಾಲಿನ ವಿದ್ಯಾರ್ಥಿ ಪಾಸ್‌ಗಳನ್ನು ಜೂ.19ರಿಂದ ನಿಗಮದ ಎಲ್ಲ ವಿಭಾಗಗಳಲ್ಲಿ ವಿತರಣೆ ಮಾಡಲಿದೆ. ವಿದ್ಯಾರ್ಥಿ ಬಸ್ ಪಾಸ್ ದರಗಳು ಕಳೆದ ವರ್ಷದ ಬಸ್ ಪಾಸ್ ದರಗಳನ್ನೇ ಈ ವರ್ಷವೂ ಮುಂದುವರಿಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಎಲ್ಲ ಹಂತದ ವಿದ್ಯಾರ್ಥಿಗಳಿಗೆ 10 ತಿಂಗಳ ಬಸ್‌ಪಾಸ್ ದರ 150ರೂ. ಆಗಿರುತ್ತದೆ. ಉಳಿದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜು, ವೃತ್ತಿಪರ ಕೋರ್ಸ್‌ಗೆ ಅನುಸಾರವಾಗಿ ಬಸ್‌ದರ ನಿಗದಿಪಡಿಸಲಾಗಿದೆ. ಈ ವರ್ಷದಿಂದ ವಿದ್ಯಾರ್ಥಿ ಬಸ್‌ಪಾಸ್‌ಗಳನ್ನು ಪಡೆಯಲು ಆನ್‌ಲೈನ್‌ನಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನಿಗಮದ ವೆಬ್‌ಸೈಟ್ www.ksrtc.in ನಲ್ಲಿ ವಿದ್ಯಾರ್ಥಿಗಳು ತಮ್ಮ ವಿವರಗಳನ್ನು ಭರ್ತಿಗೊಳಿಸಿ, ಮುದ್ರಿತ ಅರ್ಜಿಯನ್ನು ಶಾಲಾ, ಕಾಲೇಜಿನ ಮುಖ್ಯಸ್ಥರಿಂದ ದೃಢೀಕರಣ ಪಡೆದು, ಶುಲ್ಕವನ್ನು ಪಾವತಿಸಿ ಪಾಸ್ ಪಡೆಯಬಹುದು.

ಆನ್‌ಲೈನ್ ವ್ಯವಸ್ಥೆ ಲಭ್ಯವಿಲ್ಲದ ವಿದ್ಯಾರ್ಥಿಗಳು, ಕಳೆದ ವರ್ಷದಂತೆ ಮ್ಯಾನ್ಯುಯಲ್ ಅರ್ಜಿಗಳನ್ನು ಭರ್ತಿಗೊಳಿಸಿ, ಶಾಲಾ, ಕಾಲೇಜಿನ ಮುಖ್ಯಸ್ಥರಿಂದ ದೃಢೀಕರಣ ಪಡೆದು ಶಾಲಾ, ಕಾಲೇಜು ಮುಖಾಂತರ ಬಸ್‌ಪಾಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮ್ಯಾನ್ಯುಯಲ್ ಅರ್ಜಿಗಳ ನಮೂನೆಯು ನಿಗಮದ ವೆಬ್‌ಸೈಟ್ ಮತ್ತು ಬಸ್ ನಿಲ್ದಾಣಗಳಲ್ಲಿ ಲಭ್ಯವಿರುತ್ತದೆ.

ಶಾಲಾ, ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಜೂ.30ರವರೆಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದ್ದು, ಅದಕ್ಕೂ ಮುಂಚಿತವಾಗಿ ವಿದ್ಯಾರ್ಥಿ ಪಾಸ್‌ಗಳನ್ನು ಪಡೆದುಕೊಳ್ಳಬೇಕೆಂದು ಕೆಎಸ್ಸಾರ್ಟಿಸಿ ಪತ್ರಿಕಾ ಪ್ರಕಟನೆಯಲ್ಲಿ ಮನವಿ ಮಾಡಿದೆ.

ಬಸ್‌ಪಾಸ್ ದರ

ಪ್ರಾಥಮಿಕ ಶಾಲೆ- 150ರೂ.

ಪ್ರೌಢಶಾಲೆ ಬಾಲಕರು-750ರೂ.

ಪ್ರೌಢಶಾಲೆ ಬಾಲಕಿಯರು-550ರೂ.

ಪಿಯುಸಿ, ಪದವಿ, ಡಿಪ್ಲೊಮಾ-1,050ರೂ.

ವೃತ್ತಿಪರ ಕೋರ್ಸ್‌ಗಳು-1,550ರೂ.

ಸಂಜೆ ಕಾಲೇಜು, ಪಿಎಚ್‌ಡಿ-1,350

ಐಟಿಐ-1,310ರೂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News