ಈಝಿಮೈಂಡ್ ಸಂಸ್ಥೆ ವಿರುದ್ಧ ಕ್ರಮಕ್ಕೆ ಆಗ್ರಹ

Update: 2019-06-14 17:26 GMT

ತುಮಕೂರು, ಜೂ.14: ಗ್ರಾಹಕರಿಂದ ನೂರಾರು ಕೋಟಿ ಹಣವನ್ನು ಹೂಡಿಕೆ ಮಾಡಿಸಿಕೊಂಡು ಪರಾರಿಯಾಗಿರುವ ಮಹ್ಮದ್ ಅಸ್ಲಾಂ ಹಾಗೂ ಈಝಿಮೈಂಡ್ ಸಂಸ್ಥೆಯ ನೌಕರರಾದ ಶಯಾಜ್ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಗ್ರಾಹಕ ನಿಸಾರ್ ಅಹ್ಮದ್ ಒತ್ತಾಯಿಸಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಹೆಚ್ಚು ಹಣವನ್ನು ನೀಡುವ ಆಮಿಷವೊಡ್ಡಿ 5 ಲಕ್ಷಕ್ಕಿಂತ ಮೇಲ್ಪಟ್ಟು ಕೋಟಿಗಟ್ಟಲೆ ಹಣವನ್ನು ಹೂಡಿಕೆ ಮಾಡಿಸಿಕೊಂಡ ಮಹ್ಮದ್ ಅಸ್ಲಾಂ ಅವರು, ಓಲಾ ಹಾಗೂ ಉಬರ್ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಾಹನವನ್ನು ಓಡಿಸಿ ಅದರಲ್ಲಿ ಬರುವ ಆದಾಯದಲ್ಲಿ ಪಾಲು ಕೊಡುವುದಾಗಿ ಗ್ರಾಹಕರನ್ನು ನಂಬಿಸಿದ್ದರು ಎಂದರು.

ಈಝಿಮೈಂಡ್ ಇಂಡಿಯಾ ಪ್ರೈ.ಲಿನಲ್ಲಿ ಕೆಲಸ ಮಾಡಿಸುತ್ತಿದ್ದ ಕೆಲ ನೌಕರರು ತಮ್ಮ ಸಂಬಳ ಹಾಗೂ ಕೆಲ ಸಂಬಂಧಿಗಳಿಂದಲೂ ಹಣವನ್ನು ಸಂಸ್ಥೆಯಲ್ಲಿ ಹೂಡಿಕೆ ಮಾಡಿಸಿದ್ದಾರೆ, ಡಿಸೆಂಬರ್ ತಿಂಗಳಲ್ಲಿ 4 ತಿಂಗಳು 10 ದಿನದಲ್ಲಿ ಹಣವನ್ನು ದ್ವಿಗುಣಗೊಳಿಸುವ ಭರವಸೆ ನೀಡಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ಮಾರ್ಚ್ ತಿಂಗಳಲ್ಲಿ ಕಂಪೆನಿಯ ಬಾಗಿಲನ್ನು ಮುಚ್ಚಿದ್ದಾರೆ ಎಂದು ದೂರಿದರು.

ಕೆಲ ಗಣ್ಯ ವ್ಯಕ್ತಿಗಳು ಸಹ ಈ ಸಂಸ್ಥೆಯಲ್ಲಿ ಹೂಡಿಕೆ ಮಾಡುವಂತೆ ಗ್ರಾಹಕರಿಗೆ ತಿಳಿಸಿದ್ದರಿಂದ ಅತಿಹೆಚ್ಚು ಹಣವನ್ನು ಈಝಿಮೈಂಡ್‍ನಲ್ಲಿ ಹೂಡಿಕೆ ಮಾಡಲಾಗಿದೆ. ಬಡವರು ಸಹ ಹೆಚ್ಚಿನ ದುಡ್ಡಿನ ಆಸೆಗೆ ಬಿದ್ದು ಹೂಡಿಕೆ ಮಾಡಿ, ಈಗ ಬೀದಿಗೆ ಬಿದ್ದಿದ್ದಾರೆ. ಸಂಸ್ಥೆಯನ್ನು ಮುಚ್ಚಿ ದುಬೈನಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂದು ಹೂಡಿಕೆದಾರರೊಬ್ಬರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಬೀವುಲ್ಲಾ, ಹಬೀಬ್‍ವುಲ್ಲಾ ಸೇರಿದಂತೆ ಇತರರಿದ್ದರು. ಸುದ್ದಿಗೋಷ್ಠಿ ನಡೆಯುವ ವೇಳೆ ನೂರಾರು ಗ್ರಾಹಕರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News