ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ನಡೆದಿಲ್ಲ: ಪ್ರತಾಪ್ ಸಿಂಹಗೆ ಪಾಲಿಕೆ ಮೇಯರ್ ತಿರುಗೇಟು

Update: 2019-06-14 17:31 GMT

ಮೈಸೂರು,ಜೂ.14: ಹದಿನಾಲ್ಕನೇ ಹಣಕಾಸು ಯೋಜನೆಯ ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ನಡೆದಿಲ್ಲ ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ಸಂಸದ ಪ್ರತಾಪ್ ಸಿಂಹ ಗೆ ತಿರುಗೇಟು ನೀಡಿದರು.

ನಗರ ಪಾಲಿಕೆಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅನುದಾನ ಹಂಚಿಕೆಯು ಸ್ಥಾಯಿ ಸಮಿತಿಯಲ್ಲಿಯೇ ತೀರ್ಮಾನವಾಗಿರುತ್ತದೆ. ಸ್ಥಾಯಿ ಸಮಿತಿಗಳಲ್ಲಿ ಎಲ್ಲಾ ಪಕ್ಷದ ಸದಸ್ಯರೂ ಇರುತ್ತಾರೆ. ಬಿಜೆಪಿ ಸದಸ್ಯರ ಒಪ್ಪಿಗೆ ಪಡೆದೇ ಅನುದಾನ ನಿಗದಿಪಡಿಸಿಲಾಗುತ್ತದೆ. ಆದರೂ ತಾರತಮ್ಯ ಮಾಡಲಾಗುತ್ತಿದೆ ಎಂದು ಸಂಸದ ಪ್ರತಾಪಸಿಂಹ ಅವರು ಆರೋಪ ಮಾಡಿರುವುದು ಸರಿಯಲ್ಲ ಎಂದರು.

ಹಿರಿಯ ಸದಸ್ಯರು, ಪ.ಜಾತಿ ಮತ್ತು ಪ.ಪಂಗಡ ವಾರ್ಡುಗಳಿಗೆ ಹೆಚ್ಚಿನ ಅನುದಾನ ನಿಗದಿಪಡಿಸಲಾಗುತ್ತದೆ. ಆದರೆ 14ನೇ ಹಣಕಾಸು ಯೋಜನೆಯ ಅನುದಾನದ ಪೈಕಿ ಎಲ್ಲಾ ಸದಸ್ಯರಿಗೂ ಕನಿಷ್ಠ  50 ರಿಂದ  75 ಲಕ್ಷ ಅನುದಾನ ನೀಡಲಾಗುತ್ತದೆ. ಹಿರಿಯ ಸದಸ್ಯರ ವಾರ್ಡುಗಳಿಗೆ 1 ಕೋಟಿಯಿಂದ 1.25 ಕೋಟಿವರೆಗೂ ಅನುದಾನ ನೀಡಲಾಗಿದೆ. ಇದು ಎಲ್ಲರ ಅನುಮೋದನೆ ಪಡೆದೇ ನೀಡುತ್ತೇವೆ. ಹಿರಿಯ ಸದಸ್ಯರು ಯಾವುದೇ ಪಕ್ಷವಿದ್ದರೂ ಅವರಿಗೆ ಹೆಚ್ಚು ಅನುದಾನ ಹೋಗುತ್ತದೆ ಎಂದು ಅವರು ಹೇಳಿದರು.

ಈ ವಿಷಯದಲ್ಲಿ ಯಾವುದೇ ರಾಜಕೀಯ ಇಲ್ಲ. ಜೊತೆಗೆ ಅನುದಾನದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರವಾಗಲಿ, ದುರುಪಯೋಗವಾಗಲಿ ನಡೆದಿಲ್ಲ. ಪಾರದರ್ಶಕವಾಗಿಯೇ ಅನುದಾನ ಹಂಚಲಾಗಿರುತ್ತದೆ ಎಂದು ಅವರು ತಿಳಿಸಿದರು.

ಉಪ ಮೇಯರ್ ಶಫಿ ಅಹಮದ್ ಮಾತನಾಡಿ, ಯಾವ ಯಾವ ಕಾಮಗಾರಿಗೆ ಎಷ್ಟು ಅನುದಾನ ಎಂದು ಸರ್ಕಾರವೇ ನಿಗದಿಪಡಿಸಿರುತ್ತದೆ. ಇದರಲ್ಲಿ ನಮ್ಮದೇನು ಪಾತ್ರವಿಲ್ಲ. ನಗರ ಪಾಲಿಕೆಗೆ ಸಂಬಂಧಿಸಿದಂತೆ ಸಂಸದರು ಮಾಡಿರುವ ಆರೋಪ ಸರಿಯಲ್ಲ. ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ನಾಗರಾಜು, ರಮೇಶ್, ಶೋಭಾ ಸುನೀಲ್, ಪ್ರೇಮಾ ಶಂಕರೇಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News