ಕೊಡಗು ಜಿಲ್ಲೆಗೆ ಶಾಶ್ವತ ಪ್ಯಾಕೇಜ್ ಘೋಷಣೆ ಮಾಡಬೇಕು: ಸಂಸದ ಪ್ರತಾಪ್ ಸಿಂಹ

Update: 2019-06-14 18:02 GMT

ಮಡಿಕೇರಿ, ಜೂ.14 : ಕರ್ನಾಟಕದ ಅರ್ಧ ಭಾಗಕ್ಕೆ ಉಸಿರನ್ನು ನೀಡುತ್ತಿರುವ ಕಾವೇರಿಯ ಉಗಮ ಸ್ಥಾನ ಕೊಡಗು ಜಿಲ್ಲೆಗೆ ಪ್ರತಿ ವರ್ಷ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಲು ಶಾಶ್ವತ ಯೋಜನೆಯೊಂದನ್ನು ಸರ್ಕಾರ ರೂಪಿಸಬೇಕೆಂದು ಸಂಸದ ಪ್ರತಾಪ್ ಸಿಂಹ ಒತ್ತಾಯಿಸಿದ್ದಾರೆ.

ಜೀವನದಿ ಕಾವೇರಿ ಹುಟ್ಟುವ ಕೊಡಗಿಗೆ ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರತಿ ವರ್ಷ ವಿಶೇಷ ಪ್ಯಾಕೇಜ್ ನೀಡಲೇಬೇಕೆಂದು ತಿಳಿಸಿದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಮನವಿ ಮಾಡಿಕೊಂಡಿದ್ದೆ, ಆದರೆ ನಮ್ಮ ಸರ್ಕಾರ ಬರಲಿಲ್ಲ ಎಂದರು.

ಕಳೆದ ವರ್ಷದ ಅತಿವೃಷ್ಟಿಯಿಂದಾಗಿ ಮಳೆಹಾನಿ ಪ್ರದೇಶ ಮಾತ್ರವಲ್ಲದೆ, ಕೊಡಗು ಜಿಲ್ಲೆಯಾದ್ಯಂತ ಕಾಫಿ ಬೆಳೆ ನಷ್ಟವಾಗಿದ್ದು, ಬೆಳೆಗಾರರ ಸಾಲದ ಮೇಲಿನ ಬಡ್ಡಿ ಮನ್ನಾಕ್ಕೆ ಕೇಂದ್ರದ ಮೇಲೆ ಒತ್ತಡ ಹೇರುವುದಾಗಿ ಪ್ರತಾಪ ಸಿಂಹ ಭರವಸೆ ನೀಡಿದರು.

ಬೆಳೆಗಾರರ ಸಂಕಷ್ಟವನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲು ಸಂಸದರ ನಿಯೋಗ ತೆರಳಲು ನಿರ್ಧರಿಸಲಾಗಿದೆ. ಈ ನಿಯೋಗದ ನೇತೃತ್ವವನ್ನು ಮುಖ್ಯಮಂತ್ರಿಗಳೇ ವಹಿಸಿಕೊಂಡರೆ ಹೆಚ್ಚು ಸೂಕ್ತವಿತ್ತೆಂದು ಅವರು ಅಭಿಪ್ರಾಯಪಟ್ಟರು. ಮಳೆಹಾನಿ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಪ್ರಾಧಿಕಾರವನ್ನು ರಚಿಸಲಾಗಿದೆ. ಆದರೆ, ಕಾರ್ಯದ ಒತ್ತಡದಿಂದ ಮುಖ್ಯಮಂತ್ರಿಗಳಿಗೆ ಪ್ರಾಧಿಕಾರದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯವರಿಗೆ ಅದರ ನೇತೃತ್ವವನ್ನು ನೀಡಿ ಪ್ರಾಧಿಕಾರ ಕಾರ್ಯೋನ್ಮಖವಾಗುವಂತೆ ನೋಡಿಕೊಳ್ಳಬೇಕೆಂದರು.

ಆರೋಪ ಪ್ರತ್ಯಾರೋಪಗಳಲ್ಲಿ ನನಗೆ ನಂಬಿಕೆ ಇಲ್ಲ, ಈ ರೀತಿ ಮಾಡುವವರು ಕೈಯಲ್ಲಾಗದವರು ಎಂದು ಭಾವಿಸಿರುವ ನಾನು, ಸಲಹೆ ಸೂಚನೆಗಳನ್ನು ನೀಡುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿಕೊಳ್ಳುತ್ತೇನೆ. ರಾಜ್ಯ ಸಮ್ಮಿಶ್ರ ಸರ್ಕಾರದ ಭವಿಷ್ಯ ಹೇಳಲು ನಾನು ಸ್ವಾಮೀಜಿ ಅಲ್ಲವೆಂದ ಪ್ರತಾಪ್‍ಸಿಂಹ, ಸರ್ಕಾರ ಯಾವುದೇ ಇರಲಿ ಆಗಬೇಕಾದ ಅಭಿವೃದ್ಧಿ ಕಾರ್ಯಕ್ಕೆ ನೆರವು ಕೋರಿ ಕೆಲಸ ಮಾಡಿಸಿಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಸಂವಾದ ಕಾರ್ಯಕ್ರಮದಲ್ಲಿ ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಸುಬ್ರಮಣಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News