ಮರಗಳ ಕಡಿತ ಪ್ರಕರಣ: ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಮಾನತು

Update: 2019-06-14 18:06 GMT

ಮಡಿಕೇರಿ, ಜೂ.14 : ಕೊಡಗು ಜಿಲ್ಲೆಯ ವಿವಿಧೆಡೆ ನಿಯಮಬಾಹಿರವಾಗಿ ಮರಗಳ ಕಡಿತಕ್ಕೆ ಅನುಮತಿ ನೀಡಿರುವ ಅಧಿಕಾರಿಯನ್ನು ರಾಜ್ಯ ಸರಕಾರ ಅಮಾನತು ಮಾಡಿದೆ.

ನಗರದ ಹೊರವಲಯದ ಕೆ.ನಿಡುಗಣೆ ಗ್ರಾಮದ 35 ಎಕರೆ ಪ್ರದೇಶದಲ್ಲಿ ಸುಮಾರು 800ಕ್ಕೂ ಅಧಿಕ ಮರಗಳನ್ನು ಕಡಿಯಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್.ಮಂಜುನಾಥ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು)ಯವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಅವರ ಅಮಾನತಿನಿಂದ ತೆರವಾದ ಹುದ್ದೆಯ ಪ್ರಭಾರವನ್ನು ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ಟುರಾಜ ಅವರಿಗೆ ವಹಿಸಲಾಗಿದ್ದು, ಭಾರೀ ಪ್ರಮಾಣದ ಮರ ಕಡಿತಕ್ಕೆ ಕಾರಣವಾಗಿರುವ ಅಧಿಕಾರಿ ಕೊನೆಗೂ ತಲೆದಂಡ ತೆರುವಂತಾಗಿದೆ.

ಕೆ.ನಿಡುಗಣೆ ಗ್ರಾಮದಲ್ಲಿ ಸುಮಾರು 35 ಎಕರೆ ಪ್ರದೇಶದಲ್ಲಿ ವಿವಿಧ ಜಾತಿಯ ಸುಮಾರು 800ಕ್ಕೂ ಅಧಿಕ ಮರಗಳನ್ನು ಕಡಿದು ಉರುಳಿಸಲಾಗಿತ್ತು. ಇದಾದ ಒಂದೆರಡು ದಿನಗಳಲ್ಲಿ ಉತ್ತರ ಕೊಡಗಿನ ಕೊಡ್ಲಿಪೇಟೆ ಬಳಿಯ ಅವರೆದಾಳು ಗ್ರಾಮದಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬರು ಸುಮಾರು 22ಎಕರೆ ತೋಟದಲ್ಲಿ 50ಕ್ಕೂ ಅಧಿಕ ಮರಗಳನ್ನು ಕಡಿದಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೊಡಗಿನಲ್ಲಿ ಮರ ಕಡಿತವನ್ನು ತಡೆಯುವಂತೆ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ನಿರ್ದೇಶನ ನೀಡಿದ್ದರು.

ಮಡಿಕೇರಿಯಲ್ಲಿ ನಡೆದ ಮರ ಕಡಿತ ಸರಕಾರಿ ಉದ್ದೇಶಕ್ಕೆ ಎಂಬಂತೆ ಬಿಂಬಿಸಲಾಗಿತ್ತು. ಮರ ಕಡಿತ ಮಾಡಬೇಕಾಗಿರುವ ಪ್ರದೇಶ ಕರ್ನಾಟಕ ಗೃಹಮಂಡಳಿಗೆ ಸಂಬಂಧಿಸಿದ್ದು ಎಂದು ಬಿಂಬಿಸಿ ಆ ಜಾಗದಲ್ಲಿ ನಿವೇಶನಗಳನ್ನು ನಿರ್ಮಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಮರಗಳನ್ನು ಕಡಿಯುವುದು ಅನಿವಾರ್ಯ ಎಂಬಂತೆ ಕಡತಗಳಲ್ಲಿ ತೋರಿಸಲಾಗಿತ್ತು. ಮತ್ತು ಕಡಿದ ಮರಗಳನ್ನು ಕುಶಾಲನಗರದಲ್ಲಿರುವ ಅರಣ್ಯ ಇಲಾಖೆಯ ಮರದ ಡಿಪೋಗೆ ಸಾಗಿಸುವಂತೆ ಆದೇಶದಲ್ಲಿ ತೋರಿಸಲಾಗಿತ್ತು.

ಅತ್ತ ಅವರೆದಾಳು ಗ್ರಾಮದಲ್ಲಿ ನಡೆದಿರುವ ಮರ ಕಡಿತ ಪ್ರಕರಣದಲ್ಲಿ ಅರಣ್ಯ ಇಲಾಖೆಯ ಅನುಮತಿಯನ್ನೇ ಪಡೆದಿರಲಿಲ್ಲ ಎಂಬುದು ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಅಧಿಕಾರಿಗಳು ಆಮಿಷಕ್ಕೆ ಒಳಗಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. 

ಕೆ. ನಿಡುಗಣೆ ಪಂಚಾಯತ್ ಗೆ ಸೇರಿದ ಗಾಳಿಬೀಡು ರಸ್ತೆಯಲ್ಲಿ ನೂರಾರು ಮರಗಳ ಮಾರಣ ಹೋಮ ನಡೆದಿರುವ ಬಗ್ಗೆ ಮಾಜಿ ಸಚಿವ ಯಂ.ಸಿ. ನಾಣಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೆ, ಈ ಪ್ರಕರಣದ ಬಗ್ಗೆ ಸರಕಾರ ಕೂಡಲೇ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು.

ಜಿಲ್ಲೆಯಲ್ಲಿ ಸ್ವಂತ ಉಪಯೋಗಕ್ಕೆ ಒಂದೆರಡು ಮರ ಕಡಿಯಬೇಕಾದರೆ ಇಲ್ಲಸಲ್ಲದ ಕಾನೂನುಗಳ ನೆಪ ಹೇಳಿ ಅನುಮತಿ ನಿರಾಕರಿಸುವ ಅಧಿಕಾರಿಗಳು ಪ್ರವಾಸೋದ್ಯಮದ ಅಭಿವೃದ್ಧಿ ಹೆಸರಿನಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತುತ್ತಿರುವ ಹೋಂಸ್ಟೇ, ರೆಸಾರ್ಟ್‍ಗಳ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ‘ಕ್ಲಿಯರ್ ಫೆಲ್ಲಿಂಗ್’ಗೆ ಅನುಮತಿ ನೀಡುತ್ತಿದ್ದುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News