ವೈದ್ಯರ ಮೇಲೆ ಹಲ್ಲೆ ಪ್ರಕರಣ: ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

Update: 2019-06-14 18:15 GMT

ಹಾಸನ, ಜೂ.14: ಇತ್ತೀಚಿಗೆ ಕೋಲ್ಕತಾದ ಆಸ್ಪತ್ರೆಯೊಂದರಲ್ಲಿ ತೀವ್ರ ಅಸ್ವಸ್ಥರಾಗಿದ್ದ 85 ವರ್ಷದ ರೋಗಿಯೊಬ್ಬರು ಸಾವನ್ನಪ್ಪಿದ ಬಳಿಕ ಕರ್ತವ್ಯನಿರತ ವೈದ್ಯರ ಮೇಲೆ ರೋಗಿಯ ಸಂಬಂಧಿಕರು ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ಭಾರತೀಯ ವೈದ್ಯಕೀಯ ಜಿಲ್ಲಾ ಸಂಘದಿಂದ ತೋಳಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಕೋಲ್ಕತಾ ಎನ್.ಆರ್.ಎಸ್. ವೈದ್ಯಕೀಯ ಮಹಾವಿದ್ಯಾನಿಲಯ ಆಸ್ಪತ್ರೆಯಲ್ಲಿ ಕರ್ತವ್ಯದ ಮೇಲಿದ್ದ ಯುವ ವೈದ್ಯ ಡಾ.ಪರಿಭಾ ಮುಖರ್ಜಿ ಅವರ ಮೇಲೆ ನಡೆದಿರುವ ಅಮಾನವೀಯ ಹಲ್ಲೆಯನ್ನು ಖಂಡಿಸುತ್ತೇವೆ. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಎನ್ನುವುದು ಎಲ್ಲರಿಗೂ ತಿಳಿದಿದೆ. ಈ ಭೂಮಿ ಮೇಲೆ ಯಾರೂ ಅಮರರಲ್ಲ. ಹಲ್ಲೆಗೆ ಒಳಗಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಯುವ ವೈದ್ಯ ಡಾ.ಪರಿಭಾ ಮುಖರ್ಜಿ ಶೀಘ್ರ ಗುಣಮುಖರಾಗಿ ಬರಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.

ಎರಡು ದಶಕಗಳಿಂದ ವೈದ್ಯರ ಮೇಲೆ ಅದರಲ್ಲೂ ತುರ್ತು ಚಿಕಿತ್ಸೆ ನೀಡುವ ವೈದ್ಯರ ಮೇಲೆ ಹಾಗೂ ಅರೆ ವೈದೈಕೀಯ ಸಿಬ್ಬಂದಿ ಮೇಲೆ ಆಗಿಂದಾಗ್ಗೆ ದೈಹಿಕ ಹಲ್ಲೆ ನಡೆಯುತ್ತಿರುವುದು ವಿಷಾದನೀಯ ಸಂಗತಿ. ಪದೇ ಪದೆ ಭಾರತೀಯ ವೈದ್ಯಕೀಯ ಸಂಘವು ಸರಕಾರದ ಗಮನ ಸೆಳೆದಿದ್ದರೂ ನಿರ್ಲಕ್ಷ್ಯ ವಹಿಸಿದೆ. ಸಾರ್ವಜನಿಕರು ವೈದ್ಯರನ್ನು ದೇವರಂತೆ ಕಾಣಬೇಕೆಂದು ನಾವು ಬಯಸುವುದಿಲ್ಲ. ವೈದ್ಯರು ಕೂಡಾ ಮನುಷ್ಯರೆಂದು ತಿಳಿದು ಚಿಕಿತ್ಸೆ ಸಂದಭರ್ದಲ್ಲಿ ವೈದ್ಯರಿಗೆ ಭಾವನಾತ್ಮಕ ಬೆಂಬಲ ನೀಡಿ ರೋಗಿ ಗುಣಮುಖನಾಗಲು ಸಹಕರಿಸಬೇಕೆಂದು ಮನವಿ ಮಾಡುವುದಾಗಿ ತಿಳಿಸಿದರು.

ವೈದ್ಯರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕೇಂದ್ರ ಸರಕಾರ ನೂತನ ಕಾನೂನು ಜಾರಿಗೆ ತಂದು ಇಡೀ ದೇಶದಲ್ಲಿ ಅನುಷ್ಠಾನಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಭಾರತೀಯ ವೈದ್ಯಕೀಯ ಜಿಲ್ಲಾ ಸಂಘದ ಅಧ್ಯಕ್ಷ ಡಾ.ಬಿ.ಎನ್.ಶಿವಪ್ರಸಾದ್, ಕಾರ್ಯದರ್ಶಿ ಡಾ.ಜಿ.ಎನ್.ಬಸವರಾಜು, ಖಜಾಂಚಿ ಜಿ.ಎಂ.ವೆಂಕಟೇಶ್, ಡಾ.ಸಾವಿತ್ರಿ, ನಾಗೇಶ್, ಅಬ್ದೂಲ್ ಬಶೀರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News