ಆಸಕ್ತಿಗನುಗುಣವಾಗಿ ಕಲಿಕೆಗೆ ಮುಂದಾದಲ್ಲಿ ಸಾಧನೆ ಸಾಧ್ಯ: 'ಸಹಮತ' ಸಂಚಾಲಕಿ ಮಮತಾ

Update: 2019-06-15 18:03 GMT

ಚಿಕ್ಕಮಗಳೂರು, ಜೂ.16: ಮನುಷ್ಯ ಹುಟ್ಟಿದಾಗಿನಿಂದ ಬೆಳೆಯುವ ಪ್ರತೀ ಹಂತದಲ್ಲೂ ಆತನ ಆಸಕ್ತಿಗಳೂ ಹಂತಹಂತವಾಗಿ ಬದಲಾಗುತ್ತಿರುತ್ತವೆ. ಈ ಆಸಕ್ತಿಗಳಿಗೆ ತಣ್ಣೀರೆರಚಿಕೊಳ್ಳದೇ ಅವುಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮುಂದಾದಾಗ ಉತ್ತಮ ಭವಿಷ್ಯ ಹಾಗೂ ನೆಮ್ಮದಿಯ ಜೀವನ ತನ್ನದಾಗಿಸಕೊಳ್ಳಲು ಸಾಧ್ಯ ಎಂದು ಸಹಮತ ಸಂಘಟನೆಯ ಸಂಚಾಲಕಿ ಮಮತಾ ಅಭಿಪ್ರಾಯಿಸಿದ್ದಾರೆ.

ಮಂಗಳೂರಿನ ದಿ ಕ್ಯಾಂಪಸ್ ಕರಿಯರ್ ಅಕಾಡೆಮಿಯು ಜಿಲ್ಲಾ ಬ್ಯಾರಿ ಒಕ್ಕೂಟ ಮತ್ತು ಸಹಮತ ಸಂಘಟನೆಯ ಸಹಯೋಗದೊಂದಿಗೆ ಶನಿವಾರ ನಗರದ ಜಿಲ್ಲಾ ನ್ಯಾಯಾಲಯ ರಸ್ತೆಯಲ್ಲಿರುವ ಎಂಎಲ್‍ವಿ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಿಇಟಿ ಮತ್ತು ನೀಟ್ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗೆ ಕೌನ್ಸಲಿಂಗ್ ಪೂರ್ವ ಮಾರ್ಗದರ್ಶನ ಶಿಬಿರ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮನುಷ್ಯನ ಬೆಳವಣಿಗೆಯ ಹಂತದಲ್ಲಿ ಆತನ ಮನೆ, ಶಾಲೆಯ ವಾತಾವರಣ, ಸಮಾಜ, ಗೌರವ, ಹಣ ಮತ್ತಿತರ ಅಂಶಗಳು ಆತನ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತವೆ. ಪರಿಣಾಮಗಳ ಕಾರಣಕ್ಕೆ ಮನುಷ್ಯನ ಆಸಕ್ತಿಗಳೂ ಬದಲಾವಣೆಯಾಗುತ್ತಿರುತ್ತವೆ. ಈ ಹಂತದಲ್ಲಿ ಮೂಡುವ ಯಾವುದೇ ಆಸಕ್ತಿಗಳನ್ನು ಚಿವುಟಿ ಹಾಕಬಾರದು. ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಮಾತ್ರ ಸಾಧನೆ ಸಾಧ್ಯವಾಗಲಿದೆ ಎಂದರು.

ಕಲಿಕೆಯ ಹಂತದಲ್ಲಿ ವಿದ್ಯಾರ್ಥಿಗಳು ಅಪ್ಪ, ಅಮ್ಮನ ಒತ್ತಾಯಕ್ಕೆ ಮಣಿದು ಅವರ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ಇಂತಹ ವಿದ್ಯಾರ್ಥಿಗಳು ಮಾನಸಿಕವಾಗಿ ಖಿನ್ನತೆಗೊಳಗಾಗುವ ಘಟನೆಗಳು ನಡೆಯುತ್ತಿವೆ. ಈ ಕಾರಣಕ್ಕೆ ಯಾವುದೇ ವ್ಯಕ್ತಿ ತನ್ನ ಬೆಳವಣಿಗೆಯ ಹಂತದಲ್ಲಿ ಮೂಡುವ ಆಸಕ್ತಿಗನುಗುಣವಾಗಿ ಮುಂದುವರಿಯಬೇಕು ಎಂದು ಸಲಹೆ ನೀಡಿದ ಅವರು, ಜೀವನದಲ್ಲಿ ಯಶಸ್ಸು ಕಾಣಲು ಪ್ರಭುದ್ಧತೆ, ಪಕ್ವತೆ ಅತ್ಯಗತ್ಯ ಎಂದರು.

ನಂತರ ನಡೆದ ಶಬಿರದಲ್ಲಿ ವೈದ್ಯಕೀಯ, ದಂತವೈದ್ಯಕೀಯ, ಆಯುರ್ವೇದ, ಯುನಾನಿ, ಹೋಮಿಯೋಪಥಿ, ಯೋಗಾ- ನ್ಯಾಚುರಾಪಥಿ, ಬಿ ಪಾರ್ಮ್, ಫಾರ್ಮ ಡಿ, ಇಂಜಿನಿಯರ್ ಮತ್ತು ಪಾರ್ಮ್ ಸೈನ್ಸ್ ನ ವಿವಿಧ ಕೋರ್ಸ್‍ಗಳಿಗೆ ನಡೆಯಲಿರುವ ಆನ್‍ಲೈನ್ ಸಿಇಟಿ/ನೀಟ್ ಕೌನ್ಸಲಿಂಗ್ನ ವಿಧಾನ, ದಾಖಲಾತಿ ಪರಿಶೀಲನೆ, ಬೇಕಾಗಿರುವ ಅಗತ್ಯ ದಾಖಲೆಗಳು, ಸೀಟುಗಳ ಆಯ್ಕೆ ಪ್ರಕ್ರಿಯೆ ಮತ್ತು ಪಿಯುಸಿ ಬಳಿಕ ಕಲಿಕೆಗಿರುವ ಅವಕಾಶಗಳ ಕುರಿತಂತೆ  ಸಂಪನ್ಮೂಲ ವ್ಯಕ್ತಿಯಾಗಿ ಶಿಬಿರದಲ್ಲಿ ಭಾಗವಹಿಸಲಿದ್ದ ಕರಿಯರ್ ಗೈಡೆನ್ಸ್ ಅಂಡ್ ಇನ್ಫಾರ್ಮೇಶನ್ ಸೆಂಟರ್ ನ ಸ್ಥಾಪಕಾಧ್ಯಕ್ಷ ಉಮರ್ ಯು.ಎಚ್ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿಯಾ ಸಂಸ್ಥೆಯ ರಿಝ್ವಾನ್ ಖಾಲಿದ್, ಜಿಲ್ಲಾ ಬ್ಯಾರಿ ಒಕ್ಕೂಟದ ಅಧ್ಯಕ್ಷ ಸಿ.ಕೆ.ಇಬ್ರಾಹೀಂ, ಬ್ಯಾರಿ ಸಾಹಿತ್ಯ ಅಕಡೆಮಿಯ ಕೆ.ಮುಹಮ್ಮದ್ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News