ಚಿಕ್ಕಮಗಳೂರಿನ ವೀಣಾಗೆ 'ಕರ್ನಾಟಕ ಸುಂದರಿ' ಪ್ರಶಸ್ತಿ

Update: 2019-06-15 18:22 GMT

ಚಿಕ್ಕಮಗಳೂರು, ಜೂ.15: ಇತ್ತೀಚೆಗೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಮಿಸ್ಸೆಸ್ ಕರ್ನಾಟಕ ಸ್ಪರ್ಧೆಯಲ್ಲಿ ನಗರದ ವೀಣಾ ಶ್ರೀನಿವಾಸ್ ಮೂರ್ತಿ ಮೂರು ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‍ನ ಸಭಾಂಗಣದಲ್ಲಿ ಪ್ರತಿಭಾ ಸೌಶಿ ಮಠ ಆಯೋಜಿಸಿದ್ದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ 150ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು, ಮಿಸ್ಸೆಸ್ ಕರ್ನಾಟಕ, ಮಿಸ್ಸೆಸ್ ಚಿಕ್ಕಮಗಳೂರು ಮತ್ತು ಬೆಸ್ಟ್ ಪರ್ಫಾಮರ್ ಪ್ರಶಸ್ತಿ ಪಡೆಯುವ ಮೂಲಕ ವೀಣಾ ಅವರು ಕರ್ನಾಟಕ ಸುಂದರಿಯಾಗಿ ಹೊರಹೊಮ್ಮಿದ್ದಾರೆ.

3 ದಿನಗಳ ಕಾಲ ನಡೆದ ಸ್ಪರ್ಧೆಯಲ್ಲಿ ಹುಬ್ಬಳ್ಳಿ,ಧಾರವಾಡ, ಹೊಸಪೇಟೆ, ಬೆಂಗಳೂರು, ದಾವಣಗೆರೆ, ಹಾಸನ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಬಾಗಗಳಿಂದ 150 ಸ್ಪರ್ಧಿಗಳು ಭಾಗವಹಿಸಿದ್ದರು. ಈ ಹಿಂದೆ ಮೈಸೂರಿನಲ್ಲಿ ಶೈನಿಂಗ್ ಸ್ಟಾರ್, ಬೆಂಗಳೂರಿನ ಸೂಪರ್‍ಮಾಮ್, 1986ರಲ್ಲಿ ಮಿಸ್ ಚಿಕ್ಕಮಗಳೂರು ಮತ್ತು ಮಂಗಳೂರಿನಲ್ಲಿ ಇನ್ನರ್ ವೀಲ್ ಆಯೋಜಿಸಿದ್ದ ಸ್ಪರ್ಧೆಯಲ್ಲೂ ಬೆಸ್ಟ್ ಪರ್ಫಾಮೆನ್ಸ್ ಪ್ರಶಸ್ತಿ ಪಡೆದಿರುವ ವೀಣಾ ಶ್ರೀನಿವಾಸಮೂರ್ತಿ, ಮೈಸೂರು ಕುಟುಂಬದ ಅಡ್ವೋಕೇಟ್ ಎಂ.ಎ.ಶಿವಸ್ವಾಮಿಯವರ ಪುತ್ರಿಯಾಗಿದ್ದು, ನಗರದ ಹೆಸರಾಂತ ವೈದ್ಯ ದಿ.ಡಾ.ಲಕ್ಕೇಗೌಡ ಅವರ ಸೊಸೆಯಾಗಿದ್ದಾರೆ.

ವೀಣಾ ಮಾತನಾಡಿ, ವಯಸ್ಸು ಎಂಬುದು ಕೇವಲ ಸಂಖ್ಯೆ ಅಷ್ಟೆ. ಕನಸು ಕಾಣುವುದನ್ನು ನಿಲ್ಲಿಸಬಾರದು. ಕನಸು ನನಸಾಗಬೇಕಾದರೆ ಸಂಕೋಚ ಬಿಟ್ಟು ಹೊರಬರಬೇಕು. ಮತ್ತೊಬ್ಬರಿಗೆ ಉಪಯೋಗವಾಗಲೆಂದು ದೇಹದ ಅಂಗಾಂಗಗಳನ್ನು ಈಗಾಗಲೇ ನಾನು ದಾನ ಮಾಡಲು ನಿರ್ಧರಿಸಿದ್ದೇನೆ. ಕ್ಲಬ್ ಸದಸ್ಯರಿಗೂ ನೇತ್ರದಾನದಂತಹ ಮಹತ್ಕಾರ್ಯಕ್ಕೆ ಮುಂದಾಗಬೇಕೆಂದು ಪ್ರೇರಣೆ ನೀಡಿದ್ದೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News