ಕಣ್ಣಿಗೆ ಖಾರದ ಪುಡಿ ಎರಚಿ, ಚೂರಿಯಿಂದ ಇರಿದು ಯುವಕನ ಬರ್ಬರ ಹತ್ಯೆ

Update: 2019-06-16 12:40 GMT

ಹೊನ್ನಾಳಿ, ಜೂ.16: ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಆತನ ಸ್ನೇಹಿತರೇ ಕಣ್ಣಿಗೆ ಖಾರದ ಪುಡಿ ಎರಚಿ, ಚಾಕುವಿನಿಂದ ಕುತ್ತಿಗೆ, ಹೊಟ್ಟೆ ಭಾಗಕ್ಕೆ ಇರಿದು ದಾರುಣವಾಗಿ ಕೊಲೆಗೈದಿರುವ ದುರ್ಘಟನೆ ಪಟ್ಟಣದ ಖಾಸಗಿ ಬಸ್ ನಿಲ್ದಾಣಕ್ಕೆ ಸಮೀಪದ ಮೈದಾನದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ. 

ದಯಾನತ್ ಖಾನ್(20) ಕೊಲೆಗೀಡಾಗಿರುವ ಯುವಕ. ಆತನ ಸ್ನೇಹಿತರಾದ ಲೋಹಿತ್ ಮತ್ತು ಹೇಮಂತ್ ಕೊಲೆಗೈದಿರುವ ಆರೋಪಿಗಳು ಎಂದು ತಿಳಿದು ಬಂದಿದೆ.  

ಶುಕ್ರವಾರ ರಾತ್ರಿ ತನ್ನ ಮನೆಯಲ್ಲಿದ್ದ ದಯಾನತ್ ಖಾನ್‍ನನ್ನು ಆತನ ಮೂವರು ಸ್ನೇಹಿತರು ಪಾರ್ಟಿ ಇದೆ, ಹೋಗೋಣ ಬಾ ಎಂದು ಕರೆದೊಯ್ದಿದ್ದಾರೆ. ಪಟ್ಟಣದ ಖಾಸಗಿ ಬಸ್ ನಿಲ್ದಾಣಕ್ಕೆ ಸಮೀಪದ ಮೈದಾನಕ್ಕೆ ಕರೆದುಕೊಂಡು ಹೋಗಿ ದಯಾನತ್ ಖಾನ್‍ನೊಂದಿಗೆ ಜಗಳ ತೆಗೆದಿದ್ದಾರೆ. ಸ್ನೇಹಿತರ ನಡುವಿನ ವಾಗ್ವಾದ ಉಗ್ರ ರೂಪ ಪಡೆದು, ಮೂವರು ಆರೋಪಿಗಳು ದಯಾನತ್ ಖಾನ್ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಈ ಸಂದರ್ಭ ದಯಾನತ್ ಖಾನ್ ಪ್ರತಿರೋಧ ತೋರಿದ್ದು, ಆದರೂ ಬಿಡದ ಸ್ನೇಹಿತರು ದಯಾನತ್ ಖಾನ್ ದೇಹವನ್ನು ಮನಬಂದಂತೆ ಇರಿದು ಹತ್ಯೆಗೈದು ಕ್ರೌರ್ಯ ಮೆರೆದಿದ್ದಾರೆ.

ಕೊಲೆಗೆ ಕಾರಣ: ಯುವಕನ ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ, ಯುವತಿಯ ಪ್ರೀತಿ ವಿಷಯವಾಗಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

ದಯಾನತ್ ಖಾನ್ ಪಟ್ಟಣದ ಟಿ.ಬಿ. ವೃತ್ತದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ವರ್ಷ ದ್ವಿತೀಯ ಪಿಯುಸಿ ಅಧ್ಯಯನ ಮಾಡುತ್ತಿದ್ದ. ಆ ವೇಳೆ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಒಮ್ಮುಖ ಪ್ರೀತಿಯಿಂದ ನೊಂದಿದ್ದ ಯುವತಿ ಹೊನ್ನಾಳಿ ಠಾಣೆಯಲ್ಲಿ ದಯಾನತ್ ಖಾನ್ ವಿರುದ್ಧ ದೂರು ದಾಖಲಿಸಿದ್ದಳು. ಆದರೆ, ರಾಜೀ ಪಂಚಾಯಿತಿ ಬಳಿಕ ದೂರು ಹಿಂಪಡೆದಿದ್ದರು. ನಂತರದ ದಿನಗಳಲ್ಲಿಯೂ ಪ್ರೀತಿಯ ಹೆಸರಿನಲ್ಲಿ ಯುವತಿಗೆ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ಆತನ ಸ್ನೇಹಿತರೇ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಇದಲ್ಲದೇ, ಕೆಲ ತಿಂಗಳುಗಳ ಹಿಂದೆ ದಯಾನತ್ ಖಾನ್ ಸ್ನೇಹಿತನ ಹುಟ್ಟುಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡಿದ್ದಾಗ ಸಣ್ಣ ಮಟ್ಟಿನ ಗಲಾಟೆಯಾಗಿದ್ದು, ಘಟನೆ ಬಳಿಕ ಸ್ನೇಹಿತ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿಕೊಳ್ಳುತ್ತ ಇದ್ದ ಎನ್ನಲಾಗಿದೆ. ಹೀಗಾಗಿ, ಸ್ನೇಹಿತರು ಇದೇ ಕಾರಣಕ್ಕಾಗಿ ಕೊಲೆ ನಡೆಸಿರಬಹುದು ಎಂದೂ ಶಂಕಿಸಲಾಗಿದೆ.

ಜೂನ್ 11ರಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ಪ್ರಾರಂಭವಾಗಿದ್ದು, ದಯಾನತ್ ಖಾನ್ ಪಟ್ಟಣದ ಟಿ.ಬಿ.ವೃತ್ತದ ಸರಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಎರಡು ವಿಷಯಗಳ ಪರೀಕ್ಷೆ ಬರೆದಿದ್ದ. 17ರ ಸೋಮವಾರ ಮೂರನೇ ವಿಷಯದ ಪರೀಕ್ಷೆ ಬರೆಯಬೇಕಿತ್ತು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ. ಉದೇಶ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಹೊನ್ನಾಳಿ ಪೊಲೀಸರು, ಇಬ್ಬರು ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಗಿ ಪೊಲೀಸ್ ಬಂದೋಬಸ್ತ್: ಶುಕ್ರವಾರ ರಾತ್ರಿ ನಡೆದ ಯುವಕನ ಕೊಲೆಯ ವಿಷಯ ಹರಡುತ್ತಿದ್ದಂತೆ, ದಾವಣಗೆರೆಯಿಂದ ಮೂರು ಮೀಸಲು ಪಡೆ ಸಿಬ್ಬಂದಿಯ ವಾಹನಗಳು ಹೊನ್ನಾಳಿಗೆ ಆಗಮಿಸಿದವು. ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ. ಉದೇಶ್ ಪೊಲೀಸರನ್ನು ನಿಯೋಜಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News