ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್.ವಿಶ್ವನಾಥ್ ಮುಂದುವರಿಕೆ: ದೇವೇಗೌಡ ಸ್ಪಷ್ಟನೆ

Update: 2019-06-16 13:20 GMT

ಬೆಂಗಳೂರು, ಜೂ. 16: ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಎಚ್.ವಿಶ್ವನಾಥ್ ಅವರನ್ನೇ ಮುಂದುವರಿಸಲಾಗುವುದು. ಅವರನ್ನು ಬಿಟ್ಟು ಬೇರೆ ಯಾರನ್ನೂ ಆ ಸ್ಥಾನಕ್ಕೆ ನೇಮಕ ಮಾಡುವ ಪ್ರಶ್ನೆಯೆ ಇಲ್ಲ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ರವಿವಾರ ಇಲ್ಲಿನ ಜೆಪಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ವಿಶ್ವನಾಥ್ ಅವರು ಬರುವ ವರೆಗೂ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇರಲಿದೆ. ಅವರು ಸಚಿವ ಸ್ಥಾನ ಬೇಕೆಂದು ಕೇಳಿಲ್ಲ. ಮೈಸೂರು ಜಿಲ್ಲಾ ರಾಜಕಾರಣದ ಬಗ್ಗೆ ಅವರಿಗೆ ಬೇಸರವಿದ್ದು, ಅವರ ಮನವೊಲಿಕೆ ಮಾಡಲಾಗುವುದು ಎಂದರು.

ನಿಖಿಲ್ ರಾಜಕೀಯ ಕ್ಷೇತ್ರದಲ್ಲಿ: ನಿಖಿಲ್ ಲೋಕಸಭೆ ಚುನಾವಣೆ ಕಣಕ್ಕಿಳಿಯುವ ಉದ್ದೇಶವಿರಲಿಲ್ಲ. ಆದರೆ, ಮಂಡ್ಯ ಸ್ಥಳೀಯ ಮುಖಂಡರ ಒತ್ತಡಕ್ಕೆ ಮಣಿದು ಅವರನ್ನು ಕಣಕ್ಕಿಳಿಸಿದ್ದು, ಸೋಲನ್ನು ಅನುಭವಿಸಿದ್ದಾರೆ. ಅವರು ಸಿನಿಮಾಕ್ಕಿಂತ ರಾಜಕೀಯ ಕ್ಷೇತ್ರದಲ್ಲೆ ಮುಂದುವರಿಯಲಿದ್ದಾರೆಂದು ಅವರು ಸ್ಪಷ್ಟಪಡಿಸಿದರು.

ಪಕ್ಷ ಸಂಘಟನೆ: ಪ್ರಜ್ವಲ್ ರೇವಣ್ಣಗೆ ಹಾಸನ ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ಮೊದಲೇ ಪ್ರಕಟಿಸಿದ್ದೆ. ತುಮಕೂರು ಕ್ಷೇತ್ರದಲ್ಲಿ ನನ್ನ ಸೋಲಿಗೆ ಯಾರನ್ನೂ ಹೊಣೆ ಮಾಡುವುದಿಲ್ಲ. ಸೋಲಿನ ಬಗ್ಗೆ ಈಗ ಚರ್ಚೆ ಅನಗತ್ಯ. ನಾವೀಗ ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಿದ್ದೇವೆ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ದಿನವೀಡಿ ಜನರ ಸಮಸ್ಯೆ ಆಲಿಸುತ್ತಾರೆ. ಈ ಬಾರಿ ಬೆಳಗ್ಗೆಯಿಂದಲೇ ಸಿಎಂ ಗ್ರಾಮ ವಾಸ್ತವ್ಯ ಆರಂಭವಾಗಲಿದ್ದು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಸ್ಥಳದಲ್ಲೇ ಸಮಸ್ಯೆ ಪರಿಹರಿಸಲಿದ್ದು, ಸಂಜೆ ಶಾಲೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

‘ಮಾಧ್ಯಮಗಳ ಮೇಲೆ ಮುಖ್ಯಮಂತ್ರಿಗೆ ಸ್ವಲ್ಪ ಕೋಪವಿದೆ. ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರ ರಚನೆ ಮಾಡಿದ ದಿನದಿಂದಲೂ ಅವರಿಗೆ ಮಾಧ್ಯಮಗಳು ಸೂಕ್ತ ರೀತಿಯ ಬೆಂಬಲ ನೀಡುತ್ತಿಲ್ಲವೆಂಬ ನೋವಿದೆ. ಇನ್ನೂ ಮುಂದೆ ಎಲ್ಲವೂ ಸರಿಯಾಗಲಿದೆ’

-ದೇವೇಗೌಡ, ಮಾಜಿ ಪ್ರಧಾನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News