ಪಕ್ಷ ನಿಷ್ಠೆ ಮರೆತರೆ ತಾಯಿಗೆ ದ್ರೋಹ ಬಗೆದಂತೆ: ವಿ.ಎಸ್.ಉಗ್ರಪ್ಪ

Update: 2019-06-16 13:22 GMT

ಬಳ್ಳಾರಿ, ಜೂ.16: ಯಾರು ಪಕ್ಷ ನಿಷ್ಠೆ ಮರೆತು, ಸ್ವಹಿತಾಸಕ್ತಿಗಾಗಿ ಕೆಲಸ ಮಾಡುತ್ತಾರೋ ಅಂತಹವರು ತಾಯಿಗೆ ದ್ರೋಹ ಬಗೆದಂತೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

ರವಿವಾರ ಹೊಸಪೇಟೆ ನಗರದ ಕಮಲಾಪುರ ಪಟ್ಟಣ ಪಂಚಾಯತ್ ಗೆ ಆಯ್ಕೆಯಾದ ನೂತನ ಸದಸ್ಯರ ಅಭಿನಂದನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಎಲ್ಲೆಲ್ಲೂ ಅಸ್ಥಿರತೆ ಕಾಡುತ್ತಿದೆ. ಅದಕ್ಕೆ ಮುಖ್ಯ ಕಾರಣ ಪಕ್ಷ ನಿಷ್ಠೆ ಮರೆತಿರುವುದು. ಗ್ರಾಪಂನಿಂದ ಲೋಕಸಭೆ ಸದಸ್ಯರವರೆಗೆ ಪಕ್ಷದ ಚಿಹ್ನೆಯಡಿ ಚುನಾವಣೆಯಲ್ಲಿ ಗೆಲ್ಲುತ್ತಾರೆ. ನಂತರ ಅದನ್ನು ಮರೆತು ಪಕ್ಷಾಂತರ ಮಾಡುತ್ತಿದ್ದಾರೆ. ಇದರಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಪಕ್ಷಕ್ಕೆ ದ್ರೋಹ ಬಗೆಯದಂತಹ ಗುಣ ನಿಮ್ಮಲ್ಲಿ ಬೆಳೆಯಲಿ ಎಂದರು.

ಕಮಲಾಪುರ ಐತಿಹಾಸಿಕ ಮಹತ್ವ ಹೊಂದಿರುವ ಸ್ಥಳವಾಗಿದೆ. ಹಂಪಿಗೆ ಬರುವ ಪ್ರವಾಸಿಗರಿಗೆ ಕುಡಿಯುವ ನೀರು, ವಸತಿ, ಸ್ನಾನಗೃಹ, ಶೌಚಾಲಯ ಸೇರಿ ಯಾವುದೇ ವ್ಯವಸ್ಥೆಯಿಲ್ಲ. ಅದಕ್ಕಾಗಿ ಗೆದ್ದ 17 ಜನ ಸದಸ್ಯರು ಶ್ರಮಿಸಬೇಕು. ಅಧಿಕಾರ ಬರುತ್ತೆ ಹೋಗುತ್ತೆ. ಏನು ಕೆಲಸ ಮಾಡಿದ್ದೇವೆ ಎನ್ನುವುದು ಕೊನೆಯಲ್ಲಿ ಉಳಿಯುತ್ತದೆ ಎಂದು ಕಿವಿಮಾತು ಹೇಳಿದರು.

ಬಿಜೆಪಿಯವರು ಚುನಾವಣೆ ಸಂದರ್ಭದಲ್ಲಿ ತೋರುವ ಪರಾಕ್ರಮ ನಂತರ ತೋರುವುದಿಲ್ಲ. ಬಳಿಕ ಸನ್ಮಾನ, ತುಲಾಭಾರ, ದೇವಸ್ಥಾನ ಭೇಟಿಗೆ ಸೀಮಿತರಾಗಿದ್ದಾರೆ. ಇದನ್ನೆಲ್ಲ ಬದಿಗೊತ್ತಿ ಜನರಿಗಾಗಿ ಮೋದಿ ಕೆಲಸ ಮಾಡಬೇಕೆಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಟಿಂಕರ್ ರಫೀಕ್, ಅಮಾಜಿ ಹೇಮಣ್ಣ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News